ಮೊದಲೇ ಪೆಟ್ರೋಲ್, ಡೀಸೆಲ್, ಗ್ಯಾಸ್, ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತೆ ಅವರ ಖಾತೆಯಿಂದ ಗೊತ್ತೇ ಆಗದಂತೆ ಹಣ ಕಡಿತವಾಗುತ್ತದೆ.
ಬಹುತೇಕ ಗ್ರಾಹಕರು ಖಾತೆಯ ಸ್ಟೇಟ್ ಮೆಂಟ್ ಪಡೆಯದ ಕಾರಣ ಶುಲ್ಕ ಕಡಿತವಾಗಿರುವುದು ಅವರ ಗಮನಕ್ಕೆ ಬರುವುದೇ ಇಲ್ಲ. ಸ್ಟೇಟ್ಮೆಂಟ್ ಪಡೆದುಕೊಂಡಾಗ ಶುಲ್ಕ ಕಡಿತವಾದ ಮಾಹಿತಿ ಸಿಗುತ್ತದೆ. ಇತ್ತೀಚೆಗೆ ಕೆಲವು ಬ್ಯಾಂಕುಗಳಲ್ಲಿ ಸರ್ವಿಸ್ ಚಾರ್ಜ್ ಸೇರಿದಂತೆ ವಿವಿಧ ಶುಲ್ಕ, ದಂಡದ ನೆಪದಲ್ಲಿ ಖಾತೆಯಿಂದ ಹಣ ಕಡಿತ ಮಾಡಲಾಗುತ್ತಿದೆ. ಹೆಚ್ಚಿನ ಗ್ರಾಹಕರ ಗಮನಕ್ಕೆ ಇದು ಬರುವುದೇ ಇಲ್ಲ.
ಜನಸಾಮಾನ್ಯರು ಸಾಮಾನ್ಯವಾಗಿ ಅಗತ್ಯಕ್ಕೆ ಅನುಗುಣವಾಗಿ 100 ರೂಪಾಯಿಯನ್ನು ಕೂಡ ವಿತ್ ಡ್ರಾ ಮಾಡ್ತಾರೆ. ನಿಗದಿತ ವ್ಯವಹಾರ ಮುಗಿದ ನಂತರದ ಪ್ರತಿ ವ್ಯವಹಾರಕ್ಕೆ ಇಂತಿಷ್ಟು ಶುಲ್ಕವನ್ನು ಪಾವತಿಸಬೇಕಿದೆ. ತಿಂಗಳಿಗೆ 4 -5 ವಹಿವಾಟು ಮುಗಿದ ನಂತರದಲ್ಲಿ ಪ್ರತಿ ವಹಿವಾಟಿಗೂ ನಿಗದಿತ ಶುಲ್ಕ ಪಾವತಿಸಬೇಕಿದೆ.
ಅಂದಹಾಗೆ, ಹೆಚ್ಚಿನ ಸಂಖ್ಯೆಯ ಗ್ರಾಹಕರು ತಮ್ಮ ಖಾತೆಯ ಸ್ಟೇಟ್ಮೆಂಟ್ ಪಡೆದುಕೊಳ್ಳುವುದಿಲ್ಲ. ಹಾಗಾಗಿ ಕೆಲವು ಬ್ಯಾಂಕುಗಳು ಶುಲ್ಕ, ಸರ್ವೀಸ್ ಚಾರ್ಜ್ ಹೆಸರಲ್ಲಿ ನಡೆಸುವ ಹಗಲು ದರೋಡೆ ಗಮನಕ್ಕೆ ಬರುವುದೇ ಇಲ್ಲ ಎನ್ನುವುದು ಕೆಲವು ಗ್ರಾಹಕರ ಅಭಿಪ್ರಾಯವಾಗಿದೆ.
ನಗರ ಹಾಗೂ ಗ್ರಾಮೀಣ ಪ್ರದೇಶಗಳ ಬ್ಯಾಂಕ್ ಶಾಖೆಗಳಲ್ಲಿ ಖಾತೆ ಹೊಂದಿದವರು ತಮ್ಮ ಖಾತೆಯಲ್ಲಿ ಇಂತಿಷ್ಟು ಮಿನಿಮಮ್ ಬ್ಯಾಲೆನ್ಸ್ ಹೊಂದಿರಬೇಕು. 3000 ಮಿನಿಮಮ್ ಬ್ಯಾಲೆನ್ಸ್ ಖಾತೆಯಲ್ಲಿದೆ ಎಂದು ಗ್ರಾಹಕರು ತಿಳಿದಿರುತ್ತಾರೆ. ಬ್ಯಾಂಕ್ ನಿಂದ ಎಸ್ಎಂಎಸ್ ಚಾರ್ಜ್ ಎಂದು 20 ರೂ. ಶುಲ್ಕ ಕಡಿತ ಮಾಡಲಾಗುತ್ತದೆ. ಖಾತೆಯಲ್ಲಿದ್ದ ಮಿನಿಮಮ್ ಬ್ಯಾಲೆನ್ಸ್ 3000 ರೂಪಾಯಿಯಲ್ಲಿ 20 ರೂ ಕಡಿತವಾದರೆ ನೀವು ಮಿನಿಮಂ ಬ್ಯಾಲೆನ್ಸ್ ಹೊಂದಿಲ್ಲವೆಂದೇ ಅರ್ಥ. ನಂತರ ಮಿನಿಮಮ್ ಬ್ಯಾಲೆನ್ಸ್ ಮೆಂಟೇನ್ ಮಾಡಿಲ್ಲವೆಂದು ಅದಕ್ಕೂ ದಂಡ ಹಾಕಲಾಗುತ್ತದೆ.
ಕಾರ್ಡ್ ಸ್ವೈಪ್, ಆನ್ಲೈನ್ ವ್ಯವಹಾರದ ಸಂದರ್ಭದಲ್ಲಿ ನೆಟ್ ವರ್ಕ್ ಸೇರಿ ಹಲವು ಸಮಸ್ಯೆಗಳಿಂದ ನೀವು ಹಲವು ಬಾರಿ ಹಣ ಕಳಿಸಲು ವಿಫಲ ಯತ್ನ ನಡೆಸಿದಲ್ಲಿ ಅದಕ್ಕೂ ಶುಲ್ಕ ಕಡಿತವಾಗಿರುತ್ತದೆ. ಆದರೆ, ಮೆಸೇಜ್ ನಲ್ಲಿ ನೀವು ಪಾವತಿಸಿದ ಅಥವಾ ಕಳಿಸದ ಹಣ ಬಗ್ಗೆ ಮಾತ್ರ ಮಾಹಿತಿ ಬರುತ್ತದೆ. ಶುಲ್ಕ ಕಡಿತವಾಗಿದ್ರೆ ನೀವು ಸ್ಟೇಟ್ ಮೆಂಟ್ ನೋಡಿದಾಗಲೇ ಗೊತ್ತಾಗೋದು. ಹೀಗೆ ಅನೇಕ ಬ್ಯಾಂಕ್ ಗಳಲ್ಲಿ ಶುಲ್ಕ, ದಂಡ, ಸರ್ವೀಸ್ ಚಾರ್ಜ್ ಹೆಸರಲ್ಲಿ ಗೊತ್ತೇ ಆಗದಂತೆ ಗ್ರಾಹಕರ ಖಾತೆಯಿಂದ ಹಣ ಕಡಿತವಾಗುತ್ತಿದ್ದು, ಬಹುತೇಕರ ಗಮನಕ್ಕೆ ಬರುವುದೇ ಇಲ್ಲವೆನ್ನಲಾಗಿದೆ.