ಬಳ್ಳಾರಿ: 2019-20 ಮತ್ತು 2020-21ನೇ ಸಾಲಿನ ಹಿಂಗಾರು ಋತುವಿನಲ್ಲಿ ರೈತರು ಬೆಳೆದ ಭತ್ತ, ರಾಗಿ, ಜೋಳವನ್ನು ಕನಿಷ್ಟ ಬೆಂಬಲಬೆಲೆ ಯೋಜನೆಯಡಿ ರೈತರಿಂದ ಖರೀದಿಸಲು ರೈತರಿಗೆ ಅನುಕೂಲವಾಗುವಂತೆ ರೈತರ ನೊಂದಣಿ ಕಾರ್ಯವನ್ನು ಜೂ.30 ರವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.
2020-21ನೇ ಸಾಲಿನ ಹಿಂಗಾರು (ರಬಿ) ಋತುವಿನಲ್ಲಿ ಬೆಳೆದ ಭತ್ತ, ರಾಗಿ, ಜೋಳವನ್ನು ನೊಂದಾಯಿಸಿಕೊAಡು ಖರೀದಿಸಬೇಕು. ಮುಂಗಾರು ಮತ್ತು ಹಿಂಗಾರು ಋತುವಿನ ಖರೀದಿಯ ಲೆಕ್ಕಪತ್ರಗಳನ್ನು ಪ್ರತ್ಯೇಕವಾಗಿ ನಿರ್ವಹಿಸಬೇಕು. ಖರೀದಿಯು ಈಗಾಗಲೇ ತಿಳಿಸಿರುವಂತೆ ಫ್ರೂಟ್ಸ್ ತಂತ್ರಾಂಶದಲ್ಲಿ ರೈತರು ಮಾಡಿರುವ ನೋಂದಣಿ ಆಧಾರದಲ್ಲಿ ನಡೆಯಬೇಕು. ಮುಂಗಾರು ಋತುವಿನಲ್ಲಿ ಬೆಳೆದ ಬೆಳೆ ಬಗ್ಗೆ ಈಗಾಗಲೇ ನೋಂದಾಯಿಸಿದ್ದರೆ ಪುನಃ ನೋಂದಾಯಿಸುವ ಅವಶ್ಯಕತೆ ಇರುವುದಿಲ್ಲ.
ಸಾಮಾನ್ಯ ಭತ್ತ ಪ್ರತಿ ಕ್ವಿಂಟಲ್‌ಗೆ 1815 ರೂ., ಗ್ರೇಡ್ “ಎ”ಭತ್ತ ಪ್ರತಿ ಕ್ವಿಂಟಲ್‌ಗೆ 1835 ರೂ. ನಿಗದಿಪಡಿಸಲಾಗಿದೆ. ರಾಗಿ ಉತ್ಪನ್ನಕ್ಕೆ 3150 ರೂ., ಹೈಬ್ರಿಡ್ ಜೋಳಕ್ಕೆ 2550 ರೂ., ಮತ್ತು ಮಾಲ್ದಂಡಿ ಜೋಳಕ್ಕೆ 2570 ರೂ.ಗಳ ಕನಿಷ್ಟ ಬೆಂಬಲ ಬೆಲೆ ನಿಗದಿಪಡಿಸಲಾಗಿದೆ.
ಬೆಂಬಲ ಬೆಲೆ ಯೋಜನೆಯ ಮೂಲಕ ಜಿಲ್ಲೆಯ ಬಳ್ಳಾರಿ/ಕುರುಗೋಡು, ಸಿರುಗುಪ್ಪ ತಾಲೂಕುಗಳಲ್ಲಿ ಬಿಳಿಜೋಳ ಮತ್ತು ಭತ್ತ ಖರೀದಿಸಲಾಗುತ್ತದೆ ಉಳಿದ ಸಂಡೂರು, ಕೂಡ್ಲಿಗಿ/ಕೊಟ್ಟೂರು, ಹೊಸಪೇಟೆ/ಕಂಪ್ಲಿ, ಹೆಚ್.ಬಿ.ಹಳ್ಳಿ, ಹಡಗಲಿ, ಹರಪನಹಳ್ಳಿ ತಾಲೂಕುಗಳ ಆಯಾ ಎ.ಪಿ.ಎಂ.ಸಿ. ಯಾರ್ಡ್ಗಳಲ್ಲಿ ಭತ್ತ, ರಾಗಿ ಮತ್ತು ಬಿಳಿಜೋಳ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.
ಕನಿಷ್ಠ ಬೆಂಬಲೆ ಯೋಜನೆಯಡಿ ಸಂಗ್ರಾಹಣಾ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಗಳಿಗೆ ಪಾಸ್ ಹಾಗೂ ಮಾಸ್ಕ್ ಗಳನ್ನು ಕೆ.ಎಫ್.ಸಿ.ಎಸ್.ಸಿ.ಯ ಜಿಲ್ಲಾ ವ್ಯವಸ್ಥಾಪಕರ ಬಳಿ ಪಡೆದುಕೊಳ್ಳಬೇಕು ಹಾಗೂ ಮಾರಾಟ ನೋಂದಣಿಗಾಗಿ ಮತ್ತು ಮಾರಾಟಕ್ಕಾಗಿ ಧಾನ್ಯವನ್ನು ತರುವ ರೈತರಿಗೆ, ಹಮಾಲಿಗಳಿಗೆ ಹಾಗೂ ಸಾಗಾಣಿಕ ವಾಹನಗಳಿಗೆ ಕೋವಿಡ್-19 ಕರೋನಾ ವೈರಸ್ ಪ್ರಸರಣ ತಡೆಗಟ್ಟಲು ವಿಧಿಸಿರುವ ನಿರ್ಬಂಧದ ಹಿನ್ನಲೆಯಲ್ಲಿ ಅಗತ್ಯ ಪಾಸ್‌ಗಳನ್ನು ಜಂಟಿ ನಿರ್ದೇಶಕರು ಹಾಗೂ ಕೃಷಿ ಇಲಾಖೆಯಿಂದ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.