alex Certify BPL ಕಾರ್ಡ್ ದಾರರಿಗೆ ಗುಡ್ ನ್ಯೂಸ್: 5 ಲಕ್ಷ ರೂ.ವರೆಗೆ ಚಿಕಿತ್ಸೆ, ಇಲ್ಲಿದೆ ‘ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆ’ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BPL ಕಾರ್ಡ್ ದಾರರಿಗೆ ಗುಡ್ ನ್ಯೂಸ್: 5 ಲಕ್ಷ ರೂ.ವರೆಗೆ ಚಿಕಿತ್ಸೆ, ಇಲ್ಲಿದೆ ‘ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆ’ಯ ಮಾಹಿತಿ

ದಾವಣಗೆರೆ: ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ(ಎಬಿಎಆರ್‍ಕೆ) ಇದು ಒಂದು ಸರ್ವರಿಗೂ ಆರೋಗ್ಯ ಸೇವೆ ಒದಗಿಸುವ ಸಂಯೋಜಿತ ಯೋಜನೆಯಾಗಿದ್ದು, ಜಿಲ್ಲೆಯಲ್ಲಿನ ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿ ಹೊಂದಿರುವ ಎಲ್ಲ ಕುಟುಂಬಗಳ ಸದಸ್ಯರು ಎಬಿಎಆರ್‍ಕೆ ಯೋಜನೆ ಕಾರ್ಡ್ ಪಡೆದುಕೊಳ್ಳುವಂತೆ ತಿಳಿಸಲಾಗಿದೆ.

ಎಬಿಎಆರ್‍ಕೆ ಯೋಜನೆಯಲ್ಲಿ ಒಟ್ಟು 1650 ಬಗೆಯ ಚಿಕಿತ್ಸೆಗಳನ್ನು ಒದಗಿಸಲಾಗುತ್ತದೆ. ಸಾಮಾನ್ಯ ದ್ವೀತಿಯ ಹಂತದ 291 ಚಿಕಿತ್ಸಾ ವಿಧಾನಗಳು, 254 ಕ್ಲಿಷ್ಟಕರ ದ್ವೀತಿಯ ಹಂತದ ಚಿಕಿತ್ಸಾ ವಿಧಾನಗಳು, 900 ತೃತೀಯ ಹಂತದ ಚಿಕಿತ್ಸಾ ವಿಧಾನಗಳು, 169 ತುರ್ತು ಚಿಕಿತ್ಸೆಗಳು, 36 ಉಪ ಚಿಕಿತ್ಸಾ ವಿಧಾನಗಳು ಸೇರಿ ಒಟ್ಟು 1650 ಬಗೆಯ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ.

ಯೋಜನೆಯಡಿ ಬಿಪಿಎಲ್ ಕಾರ್ಡ್ ಹೊಂದಿರುವ ರೋಗಿಗಳಿಗೆ ಒಂದು ವರ್ಷಕ್ಕೆ ಒಂದು ಕುಟುಂಬಕ್ಕೆ 5 ಲಕ್ಷ ರೂ.ವರೆಗೂ ಮತ್ತು ಎಪಿಎಲ್ ಕಾರ್ಡ್ ಹೊಂದಿರುವ  ಪ್ರತಿ ಕುಟುಂಬಕ್ಕೆ 1.5 ಲಕ್ಷ ರೂ.(ಶೇಕಡಾ 30 ರಷ್ಟು) ವರೆಗೂ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸುತ್ತದೆ.

ಯೋಜನೆಯ ಸದುಪಯೋಗ ಪಡೆಯಲು ಸಾರ್ವಜನಿಕರು ಚಾಲ್ತಿಯಲ್ಲಿರುವ ಪಡಿತರ ಕಾರ್ಡ್(ಬಿಪಿಎಲ್ ಅಥವಾ ಎಪಿಎಲ್), ಆಧಾರ್ ಕಾರ್ಡ್ ಸಲ್ಲಿಸಿ ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ  ಕಾರ್ಡ್ ಪಡೆಯಬಹುದಾಗಿರುತ್ತದೆ. ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ನಗರ ಆರೋಗ್ಯ ಕೇಂದ್ರ ಹಾಗೂ ಗ್ರಾಮಪಂಚಾಯ್ತಿಯಲ್ಲಿರುವ ಬಾಪೂಜಿ ಸೇವಾ ಕೇಂದ್ರಗಳಲ್ಲಿ 10 ರೂ. ಪಾವತಿಸಿದಲ್ಲಿ ಎ4 ಹಾಳೆಯಲ್ಲಿ ಆಯುಷ್ಮಾನ್ ಕಾರ್ಡನ್ನು ಪಡೆಯಬಹುದಾಗಿದೆ. ಅದೇ ರೀತಿ ಹತ್ತಿರದ ದಾವಣಗೆರೆ ಒನ್, ಐಟಿಐ ಸೇವಾ ಕೇಂದ್ರ, ಮತ್ತು ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿರುವ ಗ್ರಾಮ ಒನ್ ಕೇಂದ್ರಗಳಲ್ಲಿ 35 ರೂ. ಪಾವತಿಸಿದಲ್ಲಿ ಎಬಿಎಆರ್‍ಕೆ ಯೋಜನೆಯ ಪ್ಲಾಸ್ಟಿಕ್ ಕಾರ್ಡ್‍ಗಳನ್ನು ಪಡೆಯಬಹುದಾಗಿದೆ. ಈ ಯೋಜನೆಯ ಸೌಲಭ್ಯ ಪಡೆಯಲು ಕುಟುಂಬದ ಪ್ರತಿ ಸದಸ್ಯರು ಕೂಡ ಕಾರ್ಡ್ ಪಡೆಯಬೇಕು.

ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಆಯುಷ್ಮಾನ್ ಕಾರ್ಡ್ ಪಡೆದ ರೋಗಿಗಳು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಯುಷ್ಮಾನ್ ಕಾರ್ಡ್‍ಗಳನ್ನು ತೆಗೆದುಕೊಂಡು ಹೋಗಬೇಕು. ಒಂದು ವೇಳೆ ಆಯುಷ್ಮಾನ್ ಕಾರ್ಡ್ ಇಲ್ಲದಿದ್ದ ಪಕ್ಷದಲ್ಲಿ ರೋಗಿಗಳು ತಮ್ಮ ಪಡಿತರ ಕಾರ್ಡ್ ಮತ್ತು ಆಧಾರ್ ಕಾರ್ಡ್‍ನ್ನು ಸಲ್ಲಿಸಿ ಯೋಜನೆಯ ಸೌಲಭ್ಯ ಪಡೆಯಬಹುದು. ರೋಗಿಗಳು ಮೊದಲು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಬೇಕು. ಈ ಯೋಜನೆಯಡಿ ಲಭ್ಯವಿರುವ ಚಿಕಿತ್ಸೆಗಳನ್ನು ಅಲ್ಲಿಯೇ ಪಡೆಯಬೇಕು. ಚಿಕಿತ್ಸೆ ಲಭ್ಯವಿಲ್ಲದಿದ್ದಲ್ಲಿ ರೆಫೆರಲ್ ಕಾರ್ಡ್(ಶಿಫಾರಸು ಪತ್ರ) ಪಡೆದುಕೊಂಡು ನೀವು ಇಚ್ಚಿಸುವ ನೊಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. 169 ಬಗೆಯ ತುರ್ತು ಚಿಕಿತ್ಸೆಗಳಿಗೆ ರೆಫೆರಲ್ ಕಾರ್ಡ್ ಇಲ್ಲದೇ ನೇರವಾಗಿ ನೊಂದಾಯಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ಪಡಿತರ ಕಾರ್ಡ್, ಆಧಾರ್ ಕಾರ್ಡ್‍ಗಳು ಈ ಯೋಜನೆಯ ಮಾನದಂಡಗಳಾಗಿರುತ್ತವೆ.

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಅಥವಾ ಟೋಲ್ ಫ್ರೀ ನಂಬರ್ 18004258330 ಕ್ಕೆ ಕರೆ ಮಾಡಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗರಾಜ್ ಮನವಿ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...