ನವದೆಹಲಿ: ಆಯುಷ್ಮಾನ್ ಭಾರತ್ ಯೋಜನೆಯ ಆಯುಷ್ಮಾನ್ ಕಾರ್ಡ್ ಅನ್ನು ಉಚಿತವಾಗಿ ನೀಡಲಾಗುವುದು. ಜೊತೆಗೆ ಉಚಿತವಾಗಿ ಚಿಕಿತ್ಸೆ ನೀಡಲಿದ್ದು, 5 ಲಕ್ಷ ರೂ. ವಿಮೆ ಕೂಡ ಪಡೆಯಬಹುದಾಗಿದೆ.
ಈ ಮೊದಲು ಕಾಗದದ ಆಯುಷ್ಮಾನ್ ಕಾರ್ಡ್ ಪಡೆಯಲು 30 ರೂ. ನೀಡಬೇಕಿತ್ತು. ಉಚಿತವಾಗಿ ಪಿವಿಸಿ ಕಾರ್ಡ್ ನೀಡಲಾಗುವುದು. ಆಯುಷ್ಮಾನ್ ಭಾರತ್ ಪ್ರಧಾನಿ ಜನ್ ಆರೋಗ್ಯ ಯೋಜನೆಯ ಫಲಾನುಭವಿಗಳಿಗೆ ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಕಾರ್ಡ್ ನೀಡಲು ತಿಳಿಸಲಾಗಿದೆ.
ಈ ಕಾರ್ಡ್ ಹೊಂದಿದ ಫಲಾನುಭವಿಗಳು ಚಿಕಿತ್ಸೆಯನ್ನು ಉಚಿತವಾಗಿ ಪಡೆಯಬಹುದು. ದೇಶಾದ್ಯಂತ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಪಡೆಯಬಹುದು. ಕಾರ್ಡ್ ನಕಲು ಪಡೆಯಲು 15 ರೂ. ಪಾವತಿಸಬೇಕಿದೆ.
ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಆಯುಷ್ಮಾನ್ ಯೋಜನೆ ಫಲಾನುಭವಿಗಳು ಸುಲಭವಾಗಿ ಚಿಕಿತ್ಸೆ ಪಡೆಯಲು ವ್ಯವಸ್ಥೆ ಕಲ್ಪಿಸಿದೆ. ದೇಶದ 10 ಕೋಟಿ ಬಡ ಕುಟುಂಬಗಳಿಗೆ ಕ್ಯಾನ್ಸರ್ ಸೇರಿದಂತೆ 1300ಕ್ಕೂ ಹೆಚ್ಚು ರೋಗಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರತಿ ಕುಟುಂಬಕ್ಕೆ 5 ಲಕ್ಷ ರೂಪಾಯಿ ವೆಚ್ಚದವರೆಗೂ ಚಿಕಿತ್ಸೆ ನೀಡಲಾಗುತ್ತದೆ.
ಯೋಜನೆಯಲ್ಲಿ ಮತ್ತೊಂದು ಅನುಕೂಲ ಕಲ್ಪಿಸಲಾಗಿದೆ. ಯೋಜನೆಗೆ ಸಂಪರ್ಕ ಹೊಂದಿದ ಕುಟುಂಬದವರನ್ನು ಮದುವೆಯಾಗಿ ಬರುವ ಸೊಸೆಗೆ ಉಚಿತವಾಗಿ ಆರೋಗ್ಯ ಸೇವೆಗಳನ್ನು ನೀಡಲಾಗುವುದು. ಈ ಸೇವೆಗಳನ್ನು ಪಡೆಯಲು ಯಾವುದೇ ಕಾರ್ಡ್ ಅಥವಾ ದಾಖಲೆಗಳ ಅಗತ್ಯವಿರುವುದಿಲ್ಲ. ಅಂತಹ ಮಹಿಳೆಯರು ತಮ್ಮ ಗಂಡನ ಆಧಾರ್ ಕಾರ್ಡ್ ತೋರಿಸುವ ಮೂಲಕ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಹಿಂದೆ ಮಹಿಳೆಯರಿಗೆ ಮದುವೆ ಪ್ರಮಾಣಪತ್ರದ ಅಗತ್ಯವಿರುತ್ತದೆ ಎನ್ನಲಾಗಿತ್ತು. ಆಯುಷ್ಮಾನ್ ಯೋಜನೆ ಕುರಿತಾದ ಮಾಹಿತಿಗೆ https://mera.pmjay.gov.in/search/login., ಸಹಾಯವಾಣಿ 14555, 1800 111 565 ಸಂಪರ್ಕಿಸಬಹುದಾಗಿದೆ.