ನವದೆಹಲಿ: ಖಾದ್ಯ ತೈಲ ಬೆಲೆ ಹೆಚ್ಚಳ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡ 52 ರಷ್ಟು ಹೆಚ್ಚಳವಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಸರಾಸರಿ ದರ ಕಳೆದ ವರ್ಷದ ಜುಲೈ ತಿಂಗಳಿಗೆ ಹೋಲಿಸಿದಾಗ ಈ ವರ್ಷದ ಜುಲೈನಲ್ಲಿ ಶೇಕಡ 52 ರಷ್ಟು ಜಾಸ್ತಿಯಾಗಿದೆ.
ಖಾದ್ಯ ತೈಲಗಳಾದ ಶೇಂಗಾ ಎಣ್ಣೆ, ಸಾಸಿವೆ ಎಣ್ಣೆ, ಸೋಯಾ ಎಣ್ಣೆ, ಸೂರ್ಯಕಾಂತಿ ಎಣ್ಣೆ, ತಾಳೆ ಎಣ್ಣೆ ದರಗಳು ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿವೆ. ಕೊರೋನಾ ಕಾರಣದಿಂದ ಧಾನ್ಯ ಮತ್ತು ಖಾದ್ಯ ತೈಲದ ಬೆಲೆಯಲ್ಲಿ ಏರಿಕೆಯಾಗಿರುವುದು ತಡೆಯಲು ಕೇಂದ್ರ ಸರ್ಕಾರ ಹಲವು ಕ್ರಮ ಕೈಗೊಂಡಿದೆ ಎಂದು ಆಹಾರ ಮತ್ತು ಗ್ರಾಹಕರ ವ್ಯವಹಾರಗಳ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ.
ಅಡುಗೆ ಎಣ್ಣೆ ದರ ಕಡಿಮೆ ಮಾಡುವ ಉದ್ದೇಶದಿಂದ ಕಚ್ಚಾ ತಾಳೆ ಎಣ್ಣೆ ಮೇಲಿನ ಸುಂಕವನ್ನು ಜೂನ್ 30 ರಿಂದ ಅನ್ವಯವಾಗುವಂತೆ ಶೇಕಡ 5 ರಷ್ಟು ಕಡಿಮೆ ಮಾಡಲಾಗಿತ್ತು. ಕೇಂದ್ರ ಸರ್ಕಾರ, ಸೆಪ್ಟೆಂಬರ್ 30 ರವರೆಗೂ ಕಚ್ಚಾ ತಾಳೆ ಎಣ್ಣೆ ಮೇಲಿನ ಸುಂಕವನ್ನು ಶೇಕಡ 5 ರಷ್ಟು ಕಡಿಮೆ ಮಾಡಿದ್ದು, ದೇಶದಲ್ಲಿ ಬಳಕೆಯಾಗುವ ಖಾದ್ಯ ತೈಲದ ಶೇಕಡ 60 ರಿಂದ 70 ರಷ್ಟು ಆಮದು ಮಾಡಿಕೊಳ್ಳಲಾಗುತ್ತಿದೆ.
ಇನ್ನು ತಾಳೆ ಎಣ್ಣೆ ಶೇಕಡ 44.42 ರಷ್ಟು, ಸೂರ್ಯಕಾಂತಿ ಎಣ್ಣೆ ಶೇಕಡ 51.62 ರಷ್ಟು, ಸೋಯಾ ಎಣ್ಣೆ ಶೇಕಡ 48.07 ರಷ್ಟು, ಸಾಸಿವೆ ಎಣ್ಣೆ ಶೇಕಡ 39.03 ರಷ್ಟು ಹಾಗೂ ಶೇಂಗಾ ಎಣ್ಣೆ ಶೇಕಡ 19.24 ರಷ್ಟು ಏರಿಕೆಯಾಗಿದೆ.