ಕೋಲಾರ ಡಿಸಿಸಿ ಬ್ಯಾಂಕ್ ನಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಮೈಕ್ರೋ ಎಟಿಎಂ ಮೂಲಕ ಸಾಲ ವಿತರಣೆ, ಹಣ ಪಾವತಿ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಶ್ರೀನಿವಾಸಗೌಡ, ಹೆಣ್ಣುಮಕ್ಕಳು ಇರುವ ಜಾಗದಲ್ಲಿ ಹಣ ಡ್ರಾ ಮಾಡುವ ಮತ್ತು ಹಣ ಪಾವತಿಸುವ ವ್ಯವಸ್ಥೆಯನ್ನು ಕೋಲಾರ ಡಿಸಿಸಿ ಬ್ಯಾಂಕ್ ಮೈಕ್ರೋ ಎಟಿಎಂ ವ್ಯವಸ್ಥೆಯನ್ನು ಜಾರಿಗೊಳಿಸುವ ಮೂಲಕ ದೇಶಕ್ಕೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ಮಾತನಾಡಿ, ಸಣ್ಣ ಸಾಲಗಾರರಿಗೆ ಮೈಕ್ರೋ ಎಟಿಎಂ ಕಾರ್ಡ್ ಸೌಲಭ್ಯ ಕಲ್ಪಿಸಲಾಗಿದೆ. ನಬಾರ್ಡ್ ಸಹಯೋಗದಲ್ಲಿ ಯೋಜನೆ ಜಾರಿಯಾಗಿದ್ದು ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆ ವ್ಯಾಪ್ತಿಯ 6.27 ಲಕ್ಷ ಖಾತೆದಾರರಿಗೆ ಮುಂದಿನ ಒಂದು ವರ್ಷದೊಳಗೆ ಮೈಕ್ರೋ ಎಟಿಎಂ ಸೌಲಭ್ಯ ಕಲ್ಪಿಸಲಾಗುವುದು. 2 ಲಕ್ಷ ಎಟಿಎಂ ಕಾರ್ಡ್ ಗೆ ಬೇಡಿಕೆ ಸಲ್ಲಿಸಿದ್ದು, ಈಗಾಗಲೇ 50 ಸಾವಿರದಷ್ಟು ಪೂರೈಕೆಯಾಗಿದೆ. ಹಂತಹಂತವಾಗಿ ಕಾರ್ಡ್ ಪೂರೈಕೆಯಾಗಲಿದ್ದು, ಅವುಗಳನ್ನು ವಿತರಣೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಬ್ಯಾಂಕಿನ ನಿರ್ದೇಶಕ ಕೆ.ವಿ. ದಯಾನಂದ್ ಮಾತನಾಡಿ, ಹಣ ಡ್ರಾ ಮಾಡಲು ಮತ್ತು ಪಾವತಿಸಲು ಚಲನ್ ಬರೆಯುವ ಅಗತ್ಯವಿಲ್ಲ. ಸದಸ್ಯರ ಮನೆಬಾಗಿಲಿಗೆ ಆಗಮಿಸಿ ಹಣ ಕಟ್ಟಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.