ನವದೆಹಲಿ: ಪತಿ ಮತ್ತು ಪತ್ನಿ ಈಗ ತಿಂಗಳಿಗೆ 10,000 ರೂ. ಪಿಂಚಣಿಯಾಗಿ ಪಡೆಯಬಹುದು. ಅಟಲ್ ಪಿಂಚಣಿ ಯೋಜನೆ(ಎಪಿವೈ) ಅಡಿಯಲ್ಲಿ ದಾಖಲಾದ ದಂಪತಿಗೆ ತಿಂಗಳಿಗೆ 10,000 ರೂ.ವರೆಗೆ ಪಿಂಚಣಿ ಪಡೆಯಲು ಅವಕಾಶವಿದೆ. ಪತಿ ಮತ್ತು ಪತ್ನಿ ಇಬ್ಬರೂ 5,000 ರೂ. ಪಿಂಚಣಿ ಮೊತ್ತಕ್ಕೆ ಎಪಿವೈಗೆ ಸೇರಬಹುದು ಎಂದು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ತಿಳಿಸಿದೆ.
ಆದರೆ, ಪಿಎಫ್‌ಆರ್‌ಡಿಎ ಹಂಚಿಕೊಂಡ ವಿವರಗಳ ಪ್ರಕಾರ ಗಂಡ ಮತ್ತು ಹೆಂಡತಿ 18 ರಿಂದ 40 ವರ್ಷದೊಳಗಿನವರಾಗಿರಬೇಕು.
ಪತಿ ಮತ್ತು ಪತ್ನಿ ಇಬ್ಬರೂ ಉಳಿತಾಯ ಬ್ಯಾಂಕ್ ಖಾತೆಗಳನ್ನು ಹೊಂದಿರಬೇಕು ಎಂದು ಪಿಎಫ್‌ಆರ್‌ಡಿಎ ತಿಳಿಸಿದೆ.
ಅಟಲ್ ಪಿಂಚಣಿ ಯೋಜನೆ ಪ್ರಯೋಜನಗಳು
ಅಟಲ್ ಪಿಂಚಣಿ ಯೋಜನೆ ಅಸಂಘಟಿತ ವಲಯದ ಎಲ್ಲ ನಾಗರಿಕರನ್ನು ಒಳಗೊಂಡಿದೆ.
ಪಿಂಚಣಿ ಯೋಜನೆಯನ್ನು ಎನ್‌ಪಿಎಸ್ ಮೂಲಕ ಪಿಎಫ್‌ಆರ್‌ಡಿಎ ನಿರ್ವಹಿಸುತ್ತದೆ.
ಪಿಂಚಣಿ ಯೋಜನೆಯಡಿ, ಚಂದಾದಾರರಿಗೆ ತಿಂಗಳಿಗೆ 1,000 ರೂ ಮತ್ತು 5,000 ರೂ.ಗಳವರೆಗೆ ಕನಿಷ್ಠ ಮಾಸಿಕ ಪಿಂಚಣಿ ಖಾತರಿ ನೀಡಲಾಗುತ್ತದೆ.
ಕೇಂದ್ರ ಸರ್ಕಾರವು ಚಂದಾದಾರರ ಕೊಡುಗೆಯಲ್ಲಿ 50 ಪ್ರತಿಶತದಷ್ಟು ಅಥವಾ ವಾರ್ಷಿಕ 1,000 ರೂ., ಯಾವುದು ಕಡಿಮೆಯೋ ಅದನ್ನು ಸಹ ಕೊಡುಗೆಯಾಗಿ ನೀಡುತ್ತದೆ.
ಯಾವುದೇ ಸಾಮಾಜಿಕ ಭದ್ರತಾ ಯೋಜನೆಗಳ ವ್ಯಾಪ್ತಿಗೆ ಒಳಪಡದ ಮತ್ತು ಆದಾಯ ತೆರಿಗೆ ಪಾವತಿಸದವರಿಗೆ ಸರ್ಕಾರದ ಸಹ ಕೊಡುಗೆ ಲಭ್ಯವಿದೆ.
ಎಲ್ಲಾ ಬ್ಯಾಂಕ್ ಖಾತೆದಾರರು ಎಪಿವೈಗೆ ಸೇರಬಹುದು ಎಂದು ಪಿಎಫ್‌ಆರ್‌ಡಿಎ ತನ್ನ ಕರಪತ್ರದಲ್ಲಿ ತಿಳಿಸಿದೆ.