ಕೊರೋನಾ ಅನೇಕರ ಉದ್ಯೋಗದ ಮೇಲೆ ಪರಿಣಾಮ ಬೀರಿದೆ. ಅದರಲ್ಲೂ ಭಾರತೀಯ ಮಹಿಳೆಯರು ಹೆಚ್ಚು ಒತ್ತಡ ಅನುಭವಿಸಿದ್ದಾರೆಂಬುದು ಸಮೀಕ್ಷೆಯಿಂದ ಹೊರ ಬಿದ್ದಿದೆ.
LinkedIn Opportunity Index 2021 ಆನ್ಲೈನ್ ಸರ್ವೆಯಲ್ಲಿ ಇದು ಗೊತ್ತಾಗಿದೆ. ಕೊರೊನಾ ಸಾಂಕ್ರಾಮಿಕ ರೋಗವು ವಿದೇಶದಲ್ಲಿ ಕೆಲಸ ಮಾಡುವ ಮಹಿಳೆಯರಿಗಿಂತ ಭಾರತದ ದುಡಿಯುವ ಮಹಿಳೆಯರ ಮೇಲೆ ಹೆಚ್ಚಿನ ಪರಿಣಾಮ ಬೀರಿದೆಯಂತೆ. ಏಷ್ಯಾ-ಪೆಸಿಫಿಕ್ ದೇಶಗಳಲ್ಲಿನ ಮಹಿಳೆಯರು ಕೆಲಸ ಮತ್ತು ಸಂಬಳಕ್ಕಾಗಿ ಹೋರಾಡಬೇಕಾಯಿತು. ಅನೇಕ ಸ್ಥಳಗಳಲ್ಲಿ ತಾರತಮ್ಯವನ್ನು ಎದುರಿಸಿದ್ರು ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.
ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇಕಡಾ 22 ರಷ್ಟು ಮಹಿಳೆಯರು, ಪುರುಷರಿಗೆ ಹೋಲಿಸಿದರೆ ತಮಗೆ ಹೆಚ್ಚು ಆದ್ಯತೆ ನೀಡಲಾಗುವುದಿಲ್ಲ ಎಂದಿದ್ದಾರೆ. ಶೇಕಡಾ 60 ರಷ್ಟು ಪ್ರದೇಶದಲ್ಲಿ ಸರಿಯಾದ ಸಮಯದಲ್ಲಿ ಬಡ್ತಿ, ವೇತನ ಹೆಚ್ಚಳ ಸಿಗುವುದಿಲ್ಲ ಎಂದು ಶೇಕಡಾ 85ರಷ್ಟು ಮಹಿಳೆಯರು ಹೇಳಿದ್ದಾರೆ.
ಈ ವರದಿಯು ಪುರುಷರು ಮತ್ತು ಮಹಿಳೆಯರಿಗೆ ಲಭ್ಯವಿರುವ ಅವಕಾಶಗಳ ವ್ಯತ್ಯಾಸವನ್ನು ತೋರಿಸುತ್ತಿದೆ. ಭಾರತದಲ್ಲಿ ಶೇಕಡಾ 37ರಷ್ಟು ದುಡಿಯುವ ಮಹಿಳೆಯರು ಪುರುಷರಿಗಿಂತ ಕಡಿಮೆ ಅವಕಾಶವನ್ನು ಪಡೆಯುತ್ತಿದ್ದಾರೆ. ಆದರೆ ಶೇಕಡಾ 25ರಷ್ಟು ಪುರುಷರು ಮಾತ್ರ ಇದನ್ನು ಒಪ್ಪುತ್ತಾರೆ.
ಕೊರೊನಾದಿಂದಾಗಿ ವರ್ಕ್ ಫ್ರಂ ಹೋಮ್ ಹೆಚ್ಚಾಗಿದೆ. ಇದು ದುಡಿಯುವ ಮಹಿಳೆಯರಿಗೆ ಸವಾಲಿನ ಕೆಲಸವಾಗಿದೆ. ಪ್ರಸ್ತುತ 10 ಮಹಿಳೆಯರಲ್ಲಿ 7 ಮಹಿಳೆಯರು ಮಕ್ಕಳನ್ನು ಪೂರ್ಣ ಸಮಯ ನೋಡಿಕೊಳ್ಳುತ್ತಿದ್ದಾರೆ. ಐದರಲ್ಲಿ ಒಬ್ಬರು ಪುರುಷ ಮಾತ್ರ ಮಕ್ಕಳನ್ನು ಪೂರ್ಣ ಸಮಯ ನೋಡಿಕೊಳ್ಳುತ್ತಿದ್ದಾನೆ.