
ಬೆಂಗಳೂರು: ಪ್ರೀತಿಸಿ ಮದುವೆಯಾಗಿದ್ದ ಯುವಕನ ಮೇಲೆ ಯುವತಿಯ ಸಂಬಂಧಿಕರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.
ವರ್ತೂರು ನಿವಾಸಿ 31 ವರ್ಷದ ಮುರಳಿ ಹಲ್ಲೆಗೊಳಗಾದ ಯುವಕ. ವರ್ತೂರು ಬಡಾವಣೆಯ ಯುವತಿ ಹಾಗೂ ಮುರಳಿ ನಾಲ್ಕು ವರ್ಷಗಳಿಂದ ಪ್ರೀತಿಸುತಿದ್ದರು. ಇದಕ್ಕೆ ಯುವತಿಗೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದು, ವಿರೋಧದ ನಡುವೆಯೂ ಜೂನ್ ನಲ್ಲಿ ಕೋಲಾರ ಜಿಲ್ಲೆಯ ಚಿಕ್ಕ ತಿರುಪತಿಯಲ್ಲಿ ಮುರಳಿ ಮತ್ತು ಯುವತಿ ಮದುವೆಯಾಗಿರು.
ಇದರಿಂದ ಕೋಪಗೊಂಡಿದ್ದ ಯುವತಿಯ ಕುಟುಂಬ ಸದಸ್ಯರು ಮುರಳಿಗೆ ಕೊಲೆ ಬೆದರಿಕೆ ಹಾಕಿದ್ದು, ಪೊಲೀಸರಿಗೆ ಮುರಳಿ ದೂರು ನೀಡಿದ್ದರು. ಪೊಲೀಸರು ಠಾಣೆಗೆ ಕರೆಸಿ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ.
ಜು. 12 ರಂದು ರಾತ್ರಿ ವರ್ತೂರಿನ ತಿಗಳರ ಬೀದಿಯಲ್ಲಿ ಮುರಳಿ ನಡೆದುಕೊಂಡು ಹೋಗುವಾಗ ಯುವತಿಯ ಸಂಬಂಧಿಗಳಾದ ನಾಗರಾಜ್, ಮಂಜುನಾಥ್ ಇತರರು ಮಾರಕಾಸ್ತ್ರಗಳಿಂದ ಮುರಳಿ ಮೇಲೆ ದಾಳಿ ಮಾಡಿದ್ದಾರೆ. ಅವರಿಂದ ತಪ್ಪಿಸಿಕೊಂಡು ಮುರಳಿ ಪ್ರಾಣಪಾಯದಿಂದ ಪಾರಾಗಿದ್ದಾನೆ. ಯುವತಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಮಂಜುನಾಥ್ ನನ್ನು ಬಂಧಿಸಿದ್ದು, ಉಳಿದವರು ನಾಪತ್ತೆಯಾಗಿದ್ದಾರೆ. ಅವರ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ.