ಅಡಿಕೆ ದರ ಏರುಗತಿಯಲ್ಲಿದ್ದು, 5 ವರ್ಷಗಳಲ್ಲಿಯೇ ಗರಿಷ್ಠ ದರ ತಲುಪಿದೆ. ಕೆಂಪಡಿಕೆ ಕ್ವಿಂಟಲ್ ಗೆ 55 ಸಾವಿರ ರೂ. ಗಡಿದಾಟಿದೆ.
ಕೆಂಪು ಅಡಿಕೆ ದರ ಗರಿಷ್ಠ ಮಟ್ಟ ತಲುಪಿ ಕ್ವಿಂಟಲ್ ಗೆ 55 ಸಾವಿರ ರೂಪಾಯಿ ಗಡಿ ದಾಟಿದ್ದು, ಬೆಳೆಗಾರರಲ್ಲಿ ಹರ್ಷ ತಂದಿದೆ. ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿಇಡಿ ಅಡಿಕೆ ಕ್ವಿಂಟಲ್ ಗೆ 54,700 ರೂಪಾಯಿಗೆ ಮಾರಾಟವಾಗಿದೆ.
ಕಳಸದಲ್ಲಿ ಕೈ ವ್ಯಾಪಾರದಲ್ಲಿ 55 ಸಾವಿರ ರೂಪಾಯಿಗೆ ವ್ಯಾಪಾರವಾಗಿದೆ. ಕೆಂಪಡಿಕೆ ದರ 53,600 ರೂಪಾಯಿ ಇದೆ. ಸರಕು ಅಡಿಕೆ ದರ ಗರಿಷ್ಠ 76,000 ರೂ., ಬೆಟ್ಟೆ ಅಡಿಕೆ ದರ 53,600 ರೂಪಾಯಿಗೆ ಮಾರಾಟವಾಗಿದ್ದು, ಗೊರಬಲು ಅಡಿಕೆಗೆ 39,500 ರೂ. ಧಾರಣೆ ಬಂದಿರುವುದು ಬೆಳೆಗಾರರಿಗೆ ಖುಷಿ ತಂದಿದೆ.
ಈ ಬಾರಿ ಅಡಿಕೆ ಫಸಲು ಕಡಿಮೆಯಾಗಿರುವುದು ಬೆಲೆ ಏರಿಕೆಗೆ ಕಾರಣವೆನ್ನಲಾಗಿದೆ. ಇನ್ನು ವಿದೇಶಗಳಿಂದ ಕಳ್ಳಸಾಗಾಣಿಕೆಯ ಮೂಲಕ ಬರುತ್ತಿದ್ದ ಅಡಿಕೆಗೆ ಬ್ರೇಕ್ ಬಿದ್ದಿರುವುದರಿಂದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಏರುಗತಿಯಲ್ಲಿ ಸಾಗಿದೆ. 2016 ರಲ್ಲಿ ಕೆಂಪಡಿಕೆ ದರ ಕ್ವಿಂಟಲ್ಗೆ 80 ಸಾವಿರ ರೂ. ಗಡಿದಾಟಿ ಐತಿಹಾಸಿಕ ದಾಖಲೆ ಬರೆದಿತ್ತು.