ವಿದೇಶದಿಂದ ಅಡಿಕೆ ಬೆಳೆ ಆಮದು ಮಾಡಿಕೊಳ್ಳಲು ಇದ್ದ ನಿಷೇಧ ಆದೇಶವನ್ನು ಕೇಂದ್ರ ಸರ್ಕಾರ ತೆರವುಗೊಳಿಸಿದೆ. ಈ ಮೂಲಕ ಅಡಿಕೆ ಧಾರಣೆ ಏರು ಗತಿಯಲ್ಲಿದ್ದ ಹೊತ್ತಲ್ಲೇ ಮತ್ತೊಮ್ಮೆ ದಿಢೀರ್ ಬಲೆ ಇಳಿಕೆ ಆತಂಕ ಎದುರಾಗಿದೆ ಎನ್ನಲಾಗಿದೆ.
ದೇಶಿಯ ಅಡಿಕೆ ಬೆಳೆಗಾರರ ಹಿತಕಾಯಲು ಅಡಿಕೆ ಆಮದು ಮೇಲೆ ನಿರ್ಬಂಧ ಹೇರಲಾಗಿತ್ತು. ಕೇಂದ್ರ ವಾಣಿಜ್ಯ ಸಚಿವಾಲಯ ನಿಯಮಗಳಿಗೆ ಸಿದ್ದುಪಡಿ ತಂದು ಪ್ರತಿ ಕೆಜಿ ಅಡಿಕೆಗೆ 251 ರೂಪಾಯಿ ಕನಿಷ್ಠ ಆಮದು ಬೆಲೆ ನಿಗದಿ ಮಾಡಿತ್ತು. ಈಗ ಕನಿಷ್ಠ ಆಮದು ಬೆಲೆ ಇಲ್ಲದೆ ಭೂತಾನ್ ನಿಂದ 17000 ಟನ್ ಹಸಿ ಅಡಿಕೆ ಆಮದು ಮಾಡಿಕೊಳ್ಳಲು ವಾಣಿಜ್ಯ ಸಚಿವಾಲಯ ಅನುಮತಿ ನೀಡಿದೆ. ಇದರಿಂದ ದೇಶಿಯ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಇಳಿಕೆಯಾಗಿ ಬೆಳೆಗಾರರಿಗೆ ಸಂಕಷ್ಟ ಎದುರಾಗಲಿದೆ.
ತನ್ನ ಬಳಕೆಗೆ ಬೇರೆ ದೇಶಗಳಿಂದ ಅಡಿಕೆ ಆಮದು ಮಾಡಿಕೊಳ್ಳುತ್ತಿರುವ ಭೂತಾನ್ ದೇಶದಿಂದ ಹಸಿ ಅಡಿಕೆಯನ್ನು ಆಮದು ಮಾಡಿಕೊಳ್ಳಲು ಭಾರತ ನಿರ್ಧರಿಸಿದೆ. ಇದುವರೆಗೂ ಯಾವುದೇ ಒಂದು ದೇಶದಿಂದ ಇಷ್ಟೊಂದು ಪ್ರಮಾಣದ ಅಡಿಕೆ ಆಮದು ಮಾಡಿಕೊಂಡಿರಲಿಲ್ಲ. ಏಕಾಏಕಿ ಇಷ್ಟೊಂದು ಪ್ರಮಾಣದ ಅಡಿಕೆ ಆಮದು ಮಾಡಿಕೊಳ್ಳಲು ನಿರ್ಧರಿಸಿರುವುದರಿಂದ ದೇಶದಲ್ಲಿ ಅಡಿಕೆ ಬೆಳೆಗಾರರಿಗೆ ಸಂಕಷ್ಟ ಎದುರಾಗಲಿದೆ ಎಂದು ಹೇಳಲಾಗಿದೆ.