ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗ್ತಿದೆ. ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ನಂತ್ರ ಜನರು ಎಲೆಕ್ಟ್ರಿಕ್ ವಾಹನಗಳ ಮೇಲೆ ಆಸಕ್ತಿ ತೋರುತ್ತಿದ್ದಾರೆ. ಸರ್ಕಾರ ಕೂಡ ಸಾಕಷ್ಟು ಸೌಲಭ್ಯವನ್ನು ನೀಡ್ತಿದೆ. ಈಗಾಗಲೇ ಅನೇಕ ಕಂಪನಿಗಳು ಎಲೆಕ್ಟ್ರಿಕ್ ವಾಹನ ಕ್ಷೇತ್ರಕ್ಕೆ ಲಗ್ಗೆಯಿಟ್ಟಿವೆ. ಪ್ರಸಿದ್ಧ ಕಂಪನಿ ಆಪಲ್ ಕೂಡ ಇದ್ರ ಮೇಲೆ ಕೆಲಸ ಮಾಡ್ತಿದೆ. ಆಪಲ್, ಎಲೆಕ್ಟ್ರಿಕ್ ಕಾರು ತಯಾರಿಕೆಗೆ ಮುಂದಾಗಿದೆ.
ಕಾರಿನ ವಿನ್ಯಾಸ, ವಿಶೇಷತೆ, ಬಿಡುಗಡೆ ದಿನಾಂಕ ಸೇರಿದಂತೆ ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಆದ್ರೆ ಕಾರಿನ ಸಂಭಾವ್ಯ ವಿನ್ಯಾಸವನ್ನು ಬಹಿರಂಗಪಡಿಸಲಾಗಿದೆ. ಕಾರ್ ಲೀಸಿಂಗ್ ಕಂಪನಿ ವನ್ರಾಮ ಆನ್‌ಲೈನ್‌ನಲ್ಲಿ ವಿನ್ಯಾಸದ ಫೋಟೋ ಹಂಚಿಕೊಂಡಿದೆ. ಈ ವಿನ್ಯಾಸಗಳು ಇಲ್ಲಿಯವರೆಗೆ ಎಲೆಕ್ಟ್ರಿಕ್ ಕಾರುಗಳಿಗಾಗಿ ಆಪಲ್ ಸಲ್ಲಿಸಿರುವ ಎಲ್ಲಾ ಪೇಟೆಂಟ್‌ಗಳಿಗೆ ಅನುಗುಣವಾಗಿರುತ್ತವೆ.
ವನ್ರಾಮ ಹೆಸರಿನ ಕಾರ್ ಲೀಸಿಂಗ್ ಕಂಪನಿಯು, ಆಪಲ್ ಎಲೆಕ್ಟ್ರಿಕ್ ಕಾರ್‌ನ ರೆಂಡರ್‌ಗಳನ್ನು ಸಿದ್ಧಪಡಿಸಿದೆ ಪ್ರಸ್ತುತ ಪೀಳಿಗೆಯ ಐಫೋನ್‌ಗಳು, ಮ್ಯಾಕ್‌ಬುಕ್‌ಗಳು ಮತ್ತು ಇತರ ಆಪಲ್ ಉತ್ಪನ್ನಗಳಿಂದ ಇದು ಸ್ಫೂರ್ತಿ ಪಡೆದಂತೆ ಕಾಣುತ್ತದೆ. ಕಾರಿನ ಹೊರ ಭಾಗ ಹಾಗೂ ಒಳ ಭಾಗ ಎರಡರ ಫೋಟೋ ಬಿಡುಗಡೆ ಮಾಡಲಾಗಿದೆ. ಕಾರಿಗೆ ನಾಲ್ಕು ಆಸನ ವ್ಯವಸ್ಥೆ ನೀಡಲಾಗಿದೆ. ಸ್ವಯಂ ಚಾಲನೆ ಸಾಮರ್ಥ್ಯ ನೀಡಲಾಗಿದ್ದು, ಸ್ಮಾರ್ಟ್ ಗೇರ್, ಸ್ಪೀಡೋಮೀಟರ್, ಮ್ಯಾಪ್, ಮ್ಯೂಸಿಕ್ ಅಪ್ಲಿಕೇಷನ್ ಗಳನ್ನು ನೋಡಬಹುದಾಗಿದೆ. ಆಪಲ್ ಕಾರಿನ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. 2025ರಲ್ಲಿ ಕಾರು ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ.