ಮೈಸೂರು: ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯದ ಪ್ರತಿ ಎಪಿಎಂಸಿಗೆ 2 ರಿಂದ 15 ಕೋಟಿ ರೂಪಾಯಿವರೆಗೆ ಅನುದಾನ ನೀಡಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಭಾನುವಾರ ನಡೆದ ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಅವರು, ಎಪಿಎಂಸಿಗಳಿಗೆ ಅನುದಾನ ನೀಡಲು ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಎಪಿಎಂಸಿಗಳ ಅಭಿವೃದ್ಧಿಗೆ ಸರ್ಕಾರ ಕಳೆದ ವರ್ಷ 205 ಕೋಟಿ ರೂ ನೀಡಿದ್ದು, ಈ ಬಾರಿ ಹೆಚ್ಚಿನ ಅನುದಾನ ಸಿಗಲಿದೆ. ರೈತರ ಅನುಕೂಲಕ್ಕಾಗಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಎಪಿಎಂಸಿಗಳನ್ನು ಉನ್ನತ ದರ್ಜೆಗೇರಿಸಲು ಪ್ರತಿ ಎಪಿಎಂಸಿಗೆ 15 ಕೋಟಿ ರೂಪಾಯಿವರೆಗೂ ಅನುದಾನ ನೀಡಲು ಸಿಎಂ ಅನುಮತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಡಿಸಿಸಿ ಬ್ಯಾಂಕ್, ಅಪೆಕ್ಸ್ ಬ್ಯಾಂಕ್ ಮೂಲಕ ರೈತರಿಗೆ 20,800 ಕೋಟಿ ರೂಪಾಯಿ ಸಾಲ ನೀಡಲು ತೀರ್ಮಾನಿಸಲಾಗಿದ್ದು, ಸುಮಾರು 30 ಲಕ್ಷ ರೈತರಿಗೆ ಪ್ರಯೋಜನವಾಗಲಿದೆ ಎಂದು ಸಚಿವರು ಹೇಳಿದ್ದಾರೆ.