ಬೆಂಗಳೂರು: ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರಗಳ ಕಾಯ್ದೆ ತಿದ್ದುಪಡಿ ವಿಧೇಯಕಕ್ಕೆ ವಿಧಾನ ಪರಿಷತ್ ನಲ್ಲಿ ಹಿನ್ನಡೆಯಾಗಿದೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಅವರು ವಿಧಾನ ಪರಿಷತ್ ನಲ್ಲಿ ಸದಸ್ಯರ ಮನವೊಲಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ. ಬಿಜೆಪಿ ವಿರೋಧ ವ್ಯಕ್ತಪಡಿಸಿ ಸದನ ಪರಿಶೀಲನಾ ಸಮಿತಿಗೆ ವಹಿಸಬೇಕೆಂದು ಪಟ್ಟು ಹಿಡಿದಿದೆ. ಈ ವೇಳೆ ಸಭಾಪತಿ ಬಸವರಾಜ ಹೊರಟ್ಟಿ ಮತಕ್ಕೆ ಹಾಕಿದ್ದಾರೆ. ಪರವಾಗಿ 31 ಮತ್ತು ವಿರೋಧವಾಗಿ 21 ಮತಗಳು ಚಲಾವಣೆಯಾಗಿದ್ದು, ಮೇಲ್ಮನೆಯಲ್ಲಿ ಎಪಿಎಂಸಿ ತಿದ್ದುಪಡಿ ಕಾಯ್ದೆಗೆ ಹಿನ್ನಡೆಯಾಗಿದೆ.
ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರಗಳ ಕಾಯ್ದೆ ತಿದ್ದುಪಡಿ ವಿಧೇಯಕವನ್ನು ಸದನ ಪರಿಶೀಲನಾ ಸಮಿತಿಗೆ ಹಸ್ತಾಂತರಿಸಲಾಗಿದೆ. ಚುನಾವಣೆ ಪ್ರಣಾಳಿಕೆಯಲ್ಲಿ ನೀಡಲಾಗಿದ್ದ ಭರವಸೆಯಂತೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಸೂದೆ ಅಂಗೀಕಾರಕ್ಕೆ ಮುಂದಾಗಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಮೊದಲ ಹಿನ್ನಡೆ ಆಗಿದೆ. ಪ್ರತಿಪಕ್ಷ ಬಿಜೆಪಿ ಸದನ ಪರಿಶೀಲನಾ ಸಮಿತಿಗೆ ಬಿಲ್ ಒಪ್ಪಿಸಬೇಕೆಂದು ಒತ್ತಾಯಿಸಿದೆ. ಮರಿತಿಬ್ಬೇಗೌಡ ಹೊರತುಪಡಿಸಿ ಜೆಡಿಎಸ್ ಸದಸ್ಯರೂ ಬೆಂಬಲಿಸಿದ್ದಾರೆ.