ನವದೆಹಲಿ: ರೈತರಿಗೆ ಶುಭ ಸುದ್ದಿ ಇಲ್ಲಿದೆ. ವಿಶ್ವದಲ್ಲಿಯೇ ಮೊದಲ ಬಾರಿಗೆ ನ್ಯಾನೋ ಡಿಎಪಿ ರಸಗೊಬ್ಬರವನ್ನು ಇಪ್ಕೋ ಕಂಪನಿ ಅಭಿವೃದ್ಧಿಪಡಿಸಿದ್ದು, ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಬುಧವಾರ ವಾಣಿಜ್ಯ ಮಾರಾಟಕ್ಕೆ ಬಿಡುಗಡೆ ಮಾಡಿದ್ದಾರೆ.
500 ಎಂಎಲ್ ಪ್ರತಿ ಬಾಟಲ್ ಗೆ 600 ರೂ. ದರ ನಿಗದಿಪಡಿಸಲಾಗಿದೆ. 2021 ರಲ್ಲಿ ನ್ಯಾನೋ ಯೂರಿಯಾ ರಸಗೊಬ್ಬರ ಮಾರಾಟ ಮಾಡಿದ್ದ ಕಂಪನಿ ಮತ್ತೊಂದು ರಸಗೊಬ್ಬರ ಬಿಡುಗಡೆ ಮಾಡಿದೆ.
ಇದುವರೆಗೆ 50 ಕೆಜಿ ಡಿಎಪಿ ರಸಗೊಬ್ಬರಕ್ಕೆ 1350 ರೂ.ಪಾವತಿಸಬೇಕಿತ್ತು. 500ಎಂಎಲ್ ನ್ಯಾನೋ ಡಿಎಪಿ ಬಾಟಲಿ 50 ಕೆಜಿ ಡಿಎಪಿ ಗೊಬ್ಬರದ ಬ್ಯಾಗ್ ಗೆ ಸಮನಾಗಿರುತ್ತದೆ. ಇದರ ದರ ಕೇವಲ 600 ರೂ. ರೈತರಿಗೆ ಶೇಕಡ 50ರಷ್ಟು ವೆಚ್ಚ ಉಳಿತಾಯವಾಗುತ್ತದೆ. ಸಾಗಣೆ ಮತ್ತು ನಿರ್ವಹಣೆ ವೆಚ್ಚವು ಕಡಿತವಾಗಲಿದೆ. ಪರಿಸರಕ್ಕೆ ಹಾನಿ ಕಡಿಮೆಯಾಗಿರುವ ಇದಕ್ಕೆ ಸಬ್ಸಿಡಿ ಇಲ್ಲ. ಇದರಿಂದಾಗಿ ಸರ್ಕಾರಕ್ಕೂ ಉಳಿತಾಯವಾಗಲಿದೆ ಎಂದು ಹೇಳಲಾಗಿದೆ.
500 ಮಿಲಿ ಬಾಟಲಿಗೆ 600 ರೂ.ಗೆ ವಾಣಿಜ್ಯ ಮಾರಾಟಕ್ಕೆ ನ್ಯಾನೊ ಡಿಎಪಿ ಗೊಬ್ಬರವನ್ನು ಬಿಡುಗಡೆ ಮಾಡಿದ ಅಮಿತ್ ಶಾ, ಸಾಂಪ್ರದಾಯಿಕ ಡಿಎಪಿಯ ಪ್ರಸ್ತುತ ಬೆಲೆಯ ಅರ್ಧಕ್ಕಿಂತ ಕಡಿಮೆ, ದ್ರಾವಕ ಡಿಎಪಿ ಬಳಕೆ, ಸಸ್ಯದ ಮೇಲೆ ಸಿಂಪಡಿಸುವ ಮೂಲಕ ಗುಣಮಟ್ಟ ಮತ್ತು ಪ್ರಮಾಣ ಎರಡನ್ನೂ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಇದು ಭೂಮಿಯ ಫಲವತ್ತತೆಯನ್ನು ಮರುಸ್ಥಾಪಿಸಲು ಬಹಳಷ್ಟು ಕೊಡುಗೆ ನೀಡುತ್ತದೆ ಮತ್ತು ರಾಸಾಯನಿಕ ಗೊಬ್ಬರಗಳಿಂದ ಉಂಟಾಗುವ ಕೋಟಿಗಟ್ಟಲೆ ಭಾರತೀಯರ ಆರೋಗ್ಯದ ಅಪಾಯವನ್ನು ಕಡಿಮೆ ಮಾಡುತ್ತದೆ. ರೈತರಿಗೆ ದ್ರವರೂಪದ ನ್ಯಾನೋ ಡಿಎಪಿ ಮತ್ತು ಯೂರಿಯಾದ ಬಳಕೆ ಹೆಚ್ಚಿಸುವಂತೆ ಸಲಹೆ ನೀಡಿದ್ದಾರೆ.