ನವದೆಹಲಿ: ಎಲೆಕ್ಟ್ರಿಕ್ ವಾಹನಗಳಲ್ಲಿ ಇತ್ತೀಚೆಗೆ ಹೆಚ್ಚಾಗಿ ಸಂಭವಿಸಿದ ಬೆಂಕಿ, ಸ್ಪೋಟ ಘಟನೆಗಳ ಬಗ್ಗೆ ಗಂಭೀರವಾಗಿ ಪರಿಗಣಿಸಿದ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಹೊಸ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡುವ ಯೋಜನೆ ಮುಂದೂಡುವಂತೆ ವಾಹನ ತಯಾರಕರಿಗೆ ಸೂಚಿಸಿದೆ.
ಸೋಮವಾರ ಎಲೆಕ್ಟ್ರಿಕ್ ವಾಹನ ತಯಾರಕರು ಭಾಗವಹಿಸಿದ್ದ ಸಭೆಯಲ್ಲಿ, ಬೆಂಕಿಯ ಕುರಿತು ತನಿಖಾ ವರದಿಯನ್ನು ಮಂಡಿಸುವವರೆಗೆ ಹೊಸ ವಾಹನಗಳ ಲಾಂಚ್ ಮುಂದೂಡುವಂತೆ ಸಚಿವಾಲಯದ ಅಧಿಕಾರಿಗಳು ಮೌಖಿಕವಾಗಿ ವಿನಂತಿಸಿದ್ದಾರೆನ್ನಲಾಗಿದೆ.
ಒಂದು ಬ್ಯಾಚ್ ನಲ್ಲಿನ ಒಂದು ವಾಹನಕ್ಕೆ ಬೆಂಕಿ ಬಿದ್ದರೆ ಸಂಪೂರ್ಣ ಬ್ಯಾಚ್ ವಾಹನಗಳನ್ನು ಹಿಂಪಡೆಯುವಂತೆ ಅಧಿಕಾರಿಗಳು ತಯಾರಕರನ್ನು ಕೇಳಿಕೊಂಡಿದ್ದಾರೆ.
ತನಿಖಾ ವರದಿಯ ಆಧಾರದ ಮೇಲೆ ಎಲೆಕ್ಟ್ರಿಕ್ ವಾಹನಗಳಿಗೆ ಹೊಸ ನಿಯಮಗಳನ್ನು ಜಾರಿಗೆ ಸರ್ಕಾರ ಯೋಜಿಸುತ್ತಿರುವುದರಿಂದ, ಹೊಸ ವಾಹನ ಲಾಂಚ್ ಮಾಡುವುದನ್ನು ಮುಂದೂಡುವಂತೆ ನಾವು ಕಂಪನಿಗಳಿಗೆ ವಿನಂತಿಸಿದ್ದೇವೆ ಎಂದು ಸಾರಿಗೆ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಾಹನಗಳು ಹೇಗೆ ಬೆಂಕಿ ಹೊತ್ತಿಕೊಂಡವು ಮತ್ತು ಯಾರ ತಪ್ಪಾಗಿದೆ. ವಾಹನ ತಯಾರಕರು ಅಥವಾ ಗ್ರಾಹಕರಿಂದ ತಪ್ಪಾಗಿದೆಯೇ ಎಂಬ ಬಗ್ಗೆ ಸರ್ಕಾರವು ಸ್ಪಷ್ಟತೆ ಬಯಸಿದೆ. ಕಂಪನಿಗಳು ಸಚಿವಾಲಯದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿವೆ. ಸಂಪೂರ್ಣ ಸಹಕಾರದ ಭರವಸೆ ನೀಡಿವೆ ಎಂದು ಅಧಿಕಾರಿ ಹೇಳಿದ್ದಾರೆ.
ಎಲೆಕ್ಟ್ರಿಕ್ ವಾಹನ ತಯಾರಕರಿಗೆ ಶುಲ್ಕ ವಿಧಿಸುವ, ಸುರಕ್ಷತೆ ಮತ್ತು ಬೆಂಕಿಯ ಘಟನೆಗಳನ್ನು ತಡೆಯುವುದು ಹೇಗೆ ಎಂದು ತಿಳಿಸಲು ಗ್ರಾಹಕರಿಗೆ ಕೇಳಿದೆ. ಕೇಂದ್ರದಿಂದ ನೇಮಕಗೊಂಡ ತಜ್ಞರ ತಂಡಗಳು ಈಗಾಗಲೇ ಈ ಕೆಲವು EV ಕಂಪನಿಗಳ ಉತ್ಪಾದನಾ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿವೆ. ಪ್ರತ್ಯೇಕವಾಗಿ, ಕಳೆದ ಕೆಲವು ದಿನಗಳಿಂದ, ತಮ್ಮ ತಂತ್ರಜ್ಞಾನ ಅಧಿಕಾರಿಗಳು ಸೇರಿದಂತೆ ಉನ್ನತ ಎಲೆಕ್ಟ್ರಿಕ್ ವಾಹನ ತಯಾರಕರು ಸಾರಿಗೆ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಘಟನೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.