ನವದೆಹಲಿ: ಗುಣಮಟ್ಟದ ಮಾನದಂಡಗಳನ್ನು ಪೂರೈಸದ ಪ್ರೆಶರ್ ಕುಕ್ಕರ್ ಗಳನ್ನು ಮಾರಾಟ ಮಾಡಿದ್ದಕ್ಕಾಗಿ ಇ-ಕಾಮರ್ಸ್ ಪ್ರಮುಖ ಅಮೆಜಾನ್ ಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ(ಸಿಸಿಪಿಎ) 1 ಲಕ್ಷ ರೂಪಾಯಿ ದಂಡ ವಿಧಿಸಿದೆ.
ತನ್ನ ಪ್ಲಾಟ್ ಫಾರ್ಮ್ ಮೂಲಕ ಮಾರಾಟವಾದ ಎಲ್ಲಾ 2,265 ಪ್ರೆಶರ್ ಕುಕ್ಕರ್ ಗಳ ಗ್ರಾಹಕರಿಗೆ ತಿಳಿಸುವಂತೆ ಅಮೆಜಾನ್‌ಗೆ ನಿರ್ದೇಶಿಸಿದೆ. ಉತ್ಪನ್ನಗಳನ್ನು ಹಿಂಪಡೆದು ಖರೀದಿದಾರರಿಗೆ ಹಣ ಮರುಪಾವತಿಸುವಂತೆ ಗ್ರಾಹಕ ವ್ಯವಹಾರಗಳ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.
ಮುಖ್ಯ ಕಮಿಷನರ್ ನಿಧಿ ಖರೆ ನೇತೃತ್ವದ ಪ್ರಾಧಿಕಾರವು, ತನ್ನ ಇ-ಕಾಮರ್ಸ್ ಪ್ಲಾಟ್ ಫಾರ್ಮ್ ನಲ್ಲಿ ಕಡ್ಡಾಯ ಮಾನದಂಡಗಳನ್ನು ಉಲ್ಲಂಘಿಸಿ ಕಡಿಮೆ ಗುಣಮಟ್ಟದ ಕುಕ್ಕರ್ ಗಳನ್ನು ಮಾರಾಟ ಮಾಡಲು ಅನುಮತಿಸಿದ್ದಕ್ಕಾಗಿ ಅಮೆಜಾನ್ ವಿರುದ್ಧ ಆದೇಶವನ್ನು ಜಾರಿಗೊಳಿಸಿದೆ.
ಅಮೆಜಾನ್, ಫ್ಲಿಪ್ ಕಾರ್ಟ್, ಪೇಟಿಎಂ ಮಾಲ್, ಶಾಪ್‌ಕ್ಲೂಸ್ ಮತ್ತು ಸ್ನಾಪ್‌ಡೀಲ್ ಸೇರಿದಂತೆ ಪ್ರಮುಖ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಮತ್ತು ಈ ಪ್ಲಾಟ್‌ಫಾರ್ಮ್‌ಗಳಲ್ಲಿ ನೋಂದಾಯಿಸಲಾದ ಮಾರಾಟಗಾರರಿಗೆ ಪ್ರಾಧಿಕಾರವು ನೋಟಿಸ್ ಗಳನ್ನು ನೀಡಿದೆ. ಅಮೆಜಾನ್ ತನ್ನ ಪ್ಲಾಟ್ ಫಾರ್ಮ್ ನಲ್ಲಿ ಮಾರಾಟವಾದ ಕುಕ್ಕರ್ ಗಳಿಗೆ ‘ಮಾರಾಟ ಕಮಿಷನ್’ ಶುಲ್ಕ ಪಡೆದಿದೆ ಎಂದು ಒಪ್ಪಿಕೊಂಡಿದೆ.