ಅಹಮದಾಬಾದ್: ಪ್ರಸಿದ್ಧ ಆನ್ ಲೈನ್ ಶಾಪಿಂಗ್ ಸಂಸ್ಥೆ ಅಮೆಜಾನ್ ಗುಜರಾತ್ ನ ಕಡಿಯಲ್ಲಿ ಸಂಪೂರ್ಣ ಮಹಿಳೆಯರೇ ಇರುವ ಸರಕು ವಿತರಣಾ ಕೇಂದ್ರವನ್ನು ಗುರುವಾರ ಪ್ರಾರಂಭಿಸಿದೆ. ಇದು, ದೇಶದ ಎರಡನೇ ಮಹಿಳಾಮಯ ಕೇಂದ್ರವಾಗಿದೆ.
ಈ ಕೇಂದ್ರದಲ್ಲಿ ವಸ್ತುಗಳನ್ನು ಡೆಲಿವರಿ ಮಾಡುವ ಸರ್ವೀಸ್ ಪಾರ್ಟ್ ನರ್ ಗಳೂ ಮಹಿಳೆಯರೇ ಆಗಿದ್ದಾರೆ ಎಂದು ಅಮೆಜಾನ್ ತಿಳಿಸಿದೆ. ಕಡಿ ಗುಜರಾತ್ ರಾಜಧಾನಿ ಅಹಮದಾಬಾದ್ ನಿಂದ 50 ಕಿಮೀ ದೂರದಲ್ಲಿದ್ದು, 80 ಸಾವಿರ ಜನ ಸಂಖ್ಯೆಯನ್ನು ಹೊಂದಿದೆ.
ಅಮೆಜಾನ್ 2016 ರಲ್ಲಿ ದೇಶದ ಮೊದಲ ಸಂಪೂರ್ಣ ಮಹಿಳಾಮಯ ಕಚೇರಿಯನ್ನು ತಮಿಳುನಾಡಿನ ಚೆನ್ನೈನಲ್ಲಿ ತೆರೆದಿತ್ತು. ಕಂಪನಿ ವಿತರಣಾ ವ್ಯವಸ್ಥೆಗೆ ಸ್ಥಳೀಯ ಮಾಹಿತಿ ಇರುವವರ ಸಹಭಾಗಿತ್ವ ಪಡೆಯುತ್ತದೆ. ಮತ್ತು ಒಟ್ಟಾರೆ ತಂತ್ರಜ್ಞಾನವನ್ನು ಒದಗಿಸುತ್ತದೆ. ಗುಜರಾತ್ ಕೇಂದ್ರದ 2.5 ಕಿಮೀ ವ್ಯಾಪ್ತಿಯಲ್ಲಿ ಸಹಾಯವಾಣಿಯನ್ನೂ ತೆರೆಯಲಾಗಿದೆ.
“ನೂತನ ಕೇಂದ್ರದಲ್ಲಿ ಮಹಿಳೆಯರಿಗೆ ಸಂಪೂರ್ಣ ಸುರಕ್ಷಿತ ವಾತಾವರಣ ಸೃಷ್ಟಿಸಲಾಗಿದೆ. ಒಟ್ಟಾರೆ ಕಂಪನಿಯಲ್ಲಿ 6 ಸಾವಿರಕ್ಕೂ ಅಧಿಕ ಮಹಿಳಾ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಕಂಪನಿ ನಿವೃತ್ತ ಸೈನಿಕರು ಹಾಗೂ ಅಂಗವಿಕಲರಿಗೂ ಅವಕಾಶ ಕಲ್ಪಿಸಲಿದೆ” ಎಂದು ಅಮೆಜಾನ್ ನ ಲಾಸ್ಟ್ ಮೇಲ್ ಆಪರೇಶನ್ ವಿಭಾಗದ ನಿರ್ದೇಶಕ ಪ್ರಕಾಶ ರಾಚಲಾನಿ ತಿಳಿಸಿದ್ದಾರೆ.