ನವದೆಹಲಿ: ಸರ್ಕಾರದ ಎಲ್ಲಾ ಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ತಲುಪಬೇಕಾದ ಅರ್ಥಿಕ ನೆರವನ್ನು ಆಧಾರ್ ಆಧರಿತ ನೇರ ನಗದು ವರ್ಗಾವಣೆಯ ಮೂಲಕ ತಲುಪಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಈ ಕುರಿತಂತೆ ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಕೇಂದ್ರದಿಂದ ಸೂಚನೆ ನೀಡಲಾಗಿದ್ದು, ವಿವಿಧ ಯೋಜನೆಗಳ ಫಲಾನುಭವಿಗಳಿಗೆ ದೊರಕಬೇಕಾದ ಮೊತ್ತವನ್ನು ನೇರವಾಗಿ ಅವರ ಖಾತೆಗಳಿಗೆ ಜಮಾ ಆಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ತಿಳಿಸಲಾಗಿದೆ.
ದತ್ತಾಂಶಗಳ ನಕಲು ಮತ್ತು ನಕಲಿ ಫಲಾನುಭವಿಗಳನ್ನು ಗುರುತಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದ್ದು, ಎಲ್ಲಾ ಕಲ್ಯಾಣ ಯೋಜನೆ ಫಲಾನುಭವಿಗಳಿಗೆ ದೊರಕಬೇಕಾದ ಅರ್ಥಿಕ ನೆರವನ್ನು ಆಧಾರ್ ಆಧಾರಿತ ನೇರ ನಗದು ವರ್ಗಾವಣೆಯಡಿ ತಲುಪಿಸುವಂತೆ ತಿಳಿಸಲಾಗಿದೆ.
ಸಬ್ಸಿಡಿಗಳನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುವ ಮೂಲಕ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವ ಗುರಿಯನ್ನು ಡಿಬಿಟಿ ಹೊಂದಿದೆ.77 ಕೋಟಿಗೂ ಹೆಚ್ಚು ಬ್ಯಾಂಕ್ ಖಾತೆಗಳು ಆಧಾರ್‌ನೊಂದಿಗೆ ಲಿಂಕ್ ಆಗಿರುವುದರಿಂದ ಅದನ್ನು ಹಣಕಾಸಿನ ವಿಳಾಸವಾಗಿಯೂ ಬಳಸಬಹುದು ಎಂದು ಹೇಳಲಾಗಿದೆ.