ನವದೆಹಲಿ: ಭಾರತದ ಅತಿ ದೊಡ್ಡ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಮತ್ತು ಸಾರ್ವಜನಿಕರಿಗೆ ಸ್ಥಿರ ಠೇವಣಿಗಳ ಹೂಡಿಕೆ, ಸಾಮಾಜಿಕ ವಂಚನೆಗಳ ಬಗ್ಗೆ ಎಚ್ಚರಿಕೆ ನೀಡಿದೆ.
ಸೈಬರ್ ಅಪರಾಧಿಗಳು ಗ್ರಾಹಕರ ಖಾತೆಗಳಲ್ಲಿ ಆನ್ಲೈನ್ ಸ್ಥಿರ ಠೇವಣಿಗಳನ್ನು ರಚಿಸಿರುವ ಬಗ್ಗೆ ಸಾಕಷ್ಟು ದೂರುಗಳು ವರದಿಯಾಗಿವೆ ಎಂದು ಎಸ್ಬಿಐ ತಿಳಿಸಿದೆ. ವಂಚಕರ ಕಾರ್ಯ ಚಟುವಟಿಕೆಗಳಲ್ಲಿ ತಮ್ಮ ನಿವ್ವಳ ಬ್ಯಾಂಕಿಂಗ್ ವಿವರಗಳೊಂದಿಗೆ ಗ್ರಾಹಕರನ್ನು ಬಲಿಪಶು ಮಾಡುವ ಇಂತಹ ವಂಚನೆ ನಡೆಯತೊಡಗಿವೆ. ವಂಚಕರು ಮೊದಲು ಎಫ್.ಡಿ. ಖಾತೆಗಳನ್ನು ರಚಿಸುತ್ತಾರೆ. ಸ್ವಲ್ಪ ಮೊತ್ತವನ್ನು ವರ್ಗಾಯಿಸುತ್ತಾರೆ.
ನಂತರ ಅವರು ಅದರ ಲಾಭವನ್ನು ಪಡೆಯಲು ಮುಂದಾಗಿ, ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ಒಟಿಪಿಯನ್ನು ಪಡೆಯುತ್ತಾರೆ. ಆಕಸ್ಮಾತ್ ಗ್ರಾಹಕರು ಒಟಿಪಿ ಹಂಚಿಕೊಂಡರೆ ಅವರು ತಮ್ಮ ಖಾತೆಗೆ ಮೊತ್ತವನ್ನು ವರ್ಗಾವಣೆ ಮಾಡಿಕೊಳ್ಳುತ್ತಾರೆ ಎಂದು ಹೇಳಲಾಗಿದೆ.
ಹಾಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ತಮ್ಮ ಖಾತೆಯ ಮೇಲೆ ನಿಗಾ ವಹಿಸುವಂತೆ ಹೇಳಿದೆ. ಒಟಿಪಿ, ಸಿವಿವಿ, ಪಾಸ್ವರ್ಡ್, ಕಾರ್ಡ್ ಸಂಖ್ಯೆ ಮೊದಲಾದ ವಿವರಗಳನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬಾರದು ಎಂದು ತಿಳಿಸಲಾಗಿದೆ. ಅಲ್ಲದೇ ಬ್ಯಾಂಕ್ ವತಿಯಿಂದ ಎಂದಿಗೂ ಕೂಡ ಪಾಸ್ವರ್ಡ್, ಒಟಿಪಿ, ಸಿವಿವಿ, ಕಾರ್ಡ್ ಸಂಖ್ಯೆಯಂತಹ ವೈಯಕ್ತಿಕ ಮಾಹಿತಿಗಳನ್ನು ಫೋನ್ ನಲ್ಲಿ ಕೇಳಲಾಗುವುದಿಲ್ಲ ಎಂದು ಹೇಳಲಾಗಿದೆ.
ಈ ಸಂದೇಶವನ್ನು ತನ್ನ ಖಾತೆದಾರರಿಗೆ ಎಸ್ಬಿಐ ಸಾಮಾಜಿಕ ಮಾಧ್ಯಮಗಳ ಮೂಲಕ ತಿಳಿಸಿದೆ. ಇದೊಂದು ಹೊಸ ರೀತಿಯ ವಂಚನೆಯಾಗಿದ್ದು, ಗ್ರಾಹಕರು ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ. ಯಾವುದೇ ಮಾಹಿತಿ ಹಂಚಿಕೊಳ್ಳದಂತೆ ಸೂಚಿಸಲಾಗಿದೆ. ಗ್ರಾಹಕರು ಸೂಚನೆಗಳನ್ನು ಪಾಲಿಸಬೇಕು ಇಲ್ಲದಿದ್ದರೆ ನಷ್ಟ ಅನುಭವಿಸಬೇಕಾದೀತು ಎಂದು ಹೇಳಲಾಗಿದೆ.