ನವದೆಹಲಿ: ನೆಟ್ ಬ್ಯಾಂಕಿಂಗ್ ಅಥವಾ ಆನ್ಲೈನ್ ಬ್ಯಾಂಕ್ ಹಣ ವರ್ಗಾವಣೆಯ ಸಂದರ್ಭದಲ್ಲಿ ಸಮಸ್ಯೆ ಎದುರಿಸುತ್ತಿರುವ ಗ್ರಾಹಕರು ಐ.ಎಫ್.ಎಸ್.ಸಿ. ಕೋಡ್ ಬದಲಾವಣೆಯಾಗಿರುವುದನ್ನು ಗಮನಿಸಬೇಕಿದೆ.
ಬ್ಯಾಂಕುಗಳ ವಿಲೀನದ ಕಾರಣದಿಂದಾಗಿ ಅನೇಕ ಬ್ಯಾಂಕ್ ಖಾತೆದಾರರು ತಮ್ಮ ಹಳೆಯ ಐ.ಎಫ್.ಎಸ್.ಸಿ. ಕೋಡ್ ಗಳನ್ನು ಬದಲಾವಣೆ ಮಾಡಿಕೊಳ್ಳಬೇಕಿದೆ.
ವಿಲೀನದ ನಂತರದ ಬ್ಯಾಂಕ್ ನಿಯಮಗಳಿಗೆ ಅನುಸಾರವಾಗಿ ಐ.ಎಫ್.ಎಸ್.ಸಿ. ಕೋಡ್ ಬದಲಾವಣೆ ಬಗ್ಗೆ ಗ್ರಾಹಕರಿಗೆ ಈಗಾಗಲೇ ತಿಳಿಸಲಾಗಿದ್ದು, ಆನ್ಲೈನ್, ನೆಟ್ ಬ್ಯಾಂಕಿಂಗ್ ನಲ್ಲೂ ಹಳೆಯ ಐ.ಎಫ್.ಎಸ್.ಸಿ. ಕೋಡ್ ಬದಲಾವಣೆಗೆ ಸೂಚಿಸಲಾಗಿದೆ. ಹಳೆಯ ಐ.ಎಫ್.ಎಸ್.ಸಿ. ಕೋಡ್ ಇನ್ನು ಮುಂದೆ NEFT, RTGS ಅಥವಾ IMPS ಮಾರ್ಗಗಳ ಮೂಲಕ ಆನ್‌ಲೈನ್ ವಹಿವಾಟಿಗೆ ಮಾನ್ಯವಾಗಿರುವುದಿಲ್ಲ.
ಸಿಂಡಿಕೇಟ್ ಬ್ಯಾಂಕ್, ಅಲಹಾಬಾದ್ ಬ್ಯಾಂಕ್, ದೇನಾ ಬ್ಯಾಂಕ್, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ, ವಿಜಯ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್ ವಿಲೀನವಾಗಿವೆ. ಇದರ ಪರಿಣಾಮ ಆನ್‌ಲೈನ್ ಬ್ಯಾಂಕಿಂಗ್ ಸೌಲಭ್ಯ ಪಡೆಯುವುದನ್ನು ಮುಂದುವರಿಸಲು ಈ ಬ್ಯಾಂಕುಗಳಲ್ಲಿನ ಖಾತೆದಾರರು ವೆಬ್ ಪೋರ್ಟಲ್‌ನಲ್ಲಿ ತಮ್ಮ ಐ.ಎಫ್.ಎಸ್.ಸಿ. ಕೋಡ್‌ಗಳನ್ನು ನವೀಕರಿಸಬೇಕಿದೆ.
ನಿಮ್ಮ ಐ.ಎಫ್.ಎಸ್.ಸಿ. ಕೋಡ್ ಬದಲಾಯಿಸಲು, ನಿಮ್ಮ ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನಿಮ್ಮ ವಿವರಗಳನ್ನು ಮತ್ತೆ ಭರ್ತಿ ಮಾಡುವ ಮೂಲಕ ಹೊಸ ಐಎಫ್‌ಎಸ್‌ಸಿ ಕೋಡ್‌ಗಳಿಗೆ ನೋಂದಾಯಿಸಿ.
ಮೊಬೈಲ್ ಬ್ಯಾಂಕಿಂಗ್‌ಗೂ ಇದೇ ನಿಯಮಗಳು ಅನ್ವಯಿಸುತ್ತವೆ. ಹೆಚ್ಚಿನ ವಿವರಗಳಿಗಾಗಿ ಗ್ರಾಹಕರು ಆಯಾ ಬ್ಯಾಂಕ್‌ಗಳನ್ನು ಸಂಪರ್ಕಿಸಲು ಸೂಚಿಸಲಾಗಿದೆ. ಈ ಬದಲಾವಣೆಗಳನ್ನು ಮಾಡಲು ವಿಫಲವಾದರೆ ಯಾವುದೇ ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ ಎನ್ನಲಾಗಿದೆ.