ನವದೆಹಲಿ: ಟೆಲಿಕಾಂ ಕಂಪನಿಗಳ ದರ ಸಮರದ ನಡುವೆ ಗ್ರಾಹಕರಿಗೆ ಕಡಿಮೆ ಬೆಲೆಗೆ ಹೆಚ್ಚು ಡೇಟಾ ಸಿಗುತ್ತಿದೆ. ಈಗ ಏರ್ಟೆಲ್ 1ಜಿಬಿ ಡೇಟಾಗೆ 100 ರೂಪಾಯಿ ದರ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಭಾರ್ತಿ ಏರ್ಟೆಲ್ ಮುಖ್ಯಸ್ಥ ಸುನಿಲ್ ಭಾರ್ತಿ ಮಿತ್ತಲ್ ಈ ಕುರಿತು ಸುಳಿವು ನೀಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು, ಪ್ರಸ್ತುತ ಗ್ರಾಹಕರು 160 ರೂಪಾಯಿಗೆ 16 ಜಿಬಿ ಡೇಟಾ ಪಡೆಯುತ್ತಿದ್ದಾರೆ. ವಾಸ್ತವದಲ್ಲಿ ಅದು 1.6 ಜಿಬಿ ಡೇಟಾ ಆಗಬೇಕಿತ್ತು ಎಂದು ತಿಳಿಸಿದ್ದಾರೆ.
ಯುರೋಪ್ ದೇಶಗಳು ಅಥವಾ ಅಮೆರಿಕದಲ್ಲಿ ಒಂದು ಜಿಬಿ ಡೇಟಾಗೆ 3700 ರೂ.ನಿಂದ 4400 ರೂ. ವರೆಗೂ ದರ ಇದೆ. ನಾವು ಅಷ್ಟೊಂದು ಹಣ ಕೇಳುತ್ತಿಲ್ಲ. ಒಂದು ಜಿಬಿಗೆ 100 ರೂಪಾಯಿ ಮಾತ್ರ ಕೇಳುತ್ತಿದ್ದೇವೆ. ಏರ್ಟೆಲ್ ಗ್ರಾಹಕರು ಈ ದರ ಪಾವತಿಸಲು ರೆಡಿಯಾಗಬೇಕಿದೆ ಎಂದು ಸುನಿಲ್ ಭಾರ್ತಿ ಮಿತ್ತಲ್ ಹೇಳಿದ್ದಾರೆ.