ನವದೆಹಲಿ: ಕೃಷಿ ವಲಯಕ್ಕೆ ಅನುಕೂಲವಾಗುವಂತೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ತೀರ್ಮಾನ ಕೈಗೊಂಡಿದೆ.
ಅಗತ್ಯವಸ್ತುಗಳ ಕಾನೂನಿಗೆ ತಿದ್ದುಪಡಿ ತರಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದ್ದು ಧಾನ್ಯ, ಈರುಳ್ಳಿ ಸಹಿತ ಹಲವು ಆಹಾರ ಪದಾರ್ಥಗಳ ಮೇಲಿನ ನಿಯಂತ್ರಣವನ್ನು ಕೈಬಿಡಲು ಕಾಯ್ದೆಗೆ ತಿದ್ದುಪಡಿ ತರಲಾಗುವುದು. ಕೃಷಿ ಕ್ಷೇತ್ರದಲ್ಲಿ ಬದಲಾವಣೆ ತರುವ ಮೂಲಕ ರೈತರ ಆದಾಯ ಹೆಚ್ಚಳಕ್ಕೆ ಈ ತೀರ್ಮಾನ ಸಹಾಯಕವಾಗಲಿದೆ ಎಂದು ಹೇಳಲಾಗಿದೆ.
ವ್ಯಾಪಾರಿಗಳು ದೊಡ್ಡ ಪ್ರಮಾಣದಲ್ಲಿ ವಸ್ತುಗಳನ್ನು ದಾಸ್ತಾನು ಮಾಡುವುದರಿಂದ ರೈತರು ಬೆಳೆದ ಬೆಳೆಗಳಿಗೆ ಬೇಡಿಕೆ ಹೆಚ್ಚಾಗಿ ಉತ್ತಮ ಬೆಲೆ ಸಿಗಲಿದೆ. ರೈತರು ಎಪಿಎಂಸಿ ಹೊರತಾಗಿಯೂ ಕೃಷಿ ಉತ್ಪನ್ನಗಳನ್ನು ಬೇರೆ ಕಡೆ ಮಾರಾಟ ಮಾಡಬಹುದು. ಕೃಷಿ ಉತ್ಪನ್ನ ವ್ಯಾಪಾರ-ವಾಣಿಜ್ಯ ಸುಗ್ರೀವಾಜ್ಞೆಗೆ ಒಪ್ಪಿಗೆ ನೀಡಲಾಗಿದ್ದು, ಒನ್ ನೇಷನ್ ಒನ್ ಮಾರ್ಕೆಟ್ ಯೋಜನೆಯನ್ನು ಜಾರಿಗೆ ತರಲಾಗುವುದು.
ಅಗತ್ಯ ವಸ್ತುಗಳ ಪಟ್ಟಿಯಿಂದ ಕೃಷಿ ಉತ್ಪನ್ನಗಳನ್ನು ತೆಗೆದು ಹಾಕುವುದರಿಂದ ಇವುಗಳ ಮೇಲಿನ ನಿಯಂತ್ರಣ ಇಲ್ಲದಂತಾಗಿ ಆರ್ಥಿಕ ಚಟುವಟಿಕೆ ಗರಿಗೆದರುತ್ತದೆ ಎಂದು ಹೇಳಲಾಗಿದೆ.