ಕೋಲಾರ: ಎಪಿಎಂಸಿ ಕಾಯ್ದೆ ವಾಪಸ್ ಪಡೆದು ಹಿಂದಿನಂತೆ ರೈತ ಪರ ಕಾಯ್ದೆ ಜಾರಿ ಮಾಡಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ನಿಯಂತ್ರಣ ಮತ್ತು ಅಭಿವೃದ್ಧಿ ತಿದ್ದುಪಡಿ ವಿಧೇಯಕ 2023 ಅನ್ನು ಮಂಡಿಸಿ ಬಿಜೆಪಿ ಸರ್ಕಾರ ಜಾರಿ ಮಾಡಿದ್ದ ಕಾಯ್ದೆ ವಾಪಸ್ ಪಡೆಯಲಾಗುವುದು. ಈ ಮೊದಲು ಇದ್ದಂತೆ ರೈತಪರ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಅಂಗೀಕಾರಗೊಂಡ ವಿಧೇಯಕವನ್ನು ವಿಧಾನಪರಿಷತ್ ನಲ್ಲಿ ಪ್ರತಿರೋಧ ಬಂದ ನಂತರ ಪರಿಶೀಲನಾ ಸಮಿತಿಗೆ ಕಳಿಸಲಾಗಿದೆ. ಪರಿಶೀಲನಾ ಸಮಿತಿ ಸದಸ್ಯರು ಎಪಿಎಂಸಿಗಳ ಕೆಲಸ ಕಾರ್ಯದ ಬಗ್ಗೆ ತಿಳಿಯಲು ಆಸಕ್ತಿ ಹೊಂದಿದ್ದು, ಕೋಲಾರದಲ್ಲಿ ಮೊದಲ ಭೇಟಿ ಕೈಗೊಳ್ಳಲಾಗಿದೆ. ವಿವಿಧೆಡೆ ಪರಿಶೀಲನೆ ನಡೆಸಿ ಮೂರ್ನಾಲ್ಕು ಸಭೆ ನಡೆಸಿ ಬಳಿಕ ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದು ಹೇಳಿದ್ದಾರೆ.
ವಿಧೇಯಕ ಅಂಗೀಕಾರವಾದಲ್ಲಿ ಮತ್ತೆ ಎಪಿಎಂಸಿಗಳು ಪುನಶ್ಚೇತನಗೊಂಡು ಆದಾಯ ಸಿಗಲಿದೆ. ರೈತರ ಬೆಳೆ, ಉತ್ಪನ್ನಗಳಿಗೆ ಯೋಗ್ಯ ಬೆಲೆ ಸಿಗಬೇಕು, ರೈತರಿಗೆ ವರ್ತಕರು ಮೋಸ ಮಾಡಬಾರದು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.