ನ್ಯೂಯಾರ್ಕ್: ಶೇ. 50 ರಷ್ಟು ಸಿಬ್ಬಂದಿಯನ್ನು ಟ್ವಿಟರ್ ಸಂಸ್ಥೆ ವಜಾಗೊಳಿಸಿದ ಬೆನ್ನಲ್ಲೇ ಫೇಸ್ಬುಕ್ ಮತ್ತು ವಾಟ್ಸಾಪ್ ಮಾತೃ ಸಂಸ್ಥೆ ಮೆಟಾ ಕೂಡ ಭಾರಿ ಪ್ರಮಾಣದಲ್ಲಿ ಉದ್ಯೋಗ ಕಡಿತಕ್ಕೆ ಮುಂದಾಗಿದೆ.
ವಾಲ್ ಸ್ಟ್ರೀಟ್ ಜರ್ನಲ್ ವರದಿಯ ಪ್ರಕಾರ, ಮೆಟಾ 85,000ಕ್ಕೂ ಹೆಚ್ಚು ನೌಕರರನ್ನು ಹೊಂದಿದ್ದು, ಇವರಲ್ಲಿ ಭಾರಿ ಸಂಖ್ಯೆಯ ಉದ್ಯೋಗಿಗಳನ್ನು ಕಡಿತಗೊಳಿಸಲು ಮುಂದಾಗಿದೆ. ಮುಂದಿನ ತ್ರೈಮಾಸಿಕ ಆದಾಯ ದೃಷ್ಟಿಯಿಂದ ಆಶಾದಾಯಕವಾಗಿಲ್ಲ. ವೆಚ್ಚವೂ ಅಧಿಕವಾಗಿರಲಿದೆ ಎಂದು ಅಂದಾಜಿಸಿರುವ ಮೆಟಾ ಜಾಗತಿಕ ಆರ್ಥಿಕ ಪ್ರಗತಿ ಮಂದವಾಗಿರುವುದರಿಂದ ಭಾರಿ ಸಂಖ್ಯೆಯ ಸಿಬ್ಬಂದಿ ಕಡಿತಕ್ಕೆ ಚಿಂತನೆ ನಡೆಸಿದ್ದು, ಬುಧವಾರದ ವೇಳೆಗೆ ಅಧಿಕೃತ ಘೋಷಣೆ ಹೊರ ಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಮೆಟಾ ಸೆಪ್ಟೆಂಬರ್ ಅಂತ್ಯದಲ್ಲಿ 87,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವರದಿ ಮಾಡಿದೆ. ಈ ವಾರದಿಂದ ಅನಗತ್ಯ ಪ್ರಯಾಣವನ್ನು ರದ್ದುಗೊಳಿಸುವಂತೆ ಕಂಪನಿಯ ಅಧಿಕಾರಿಗಳು ಈಗಾಗಲೇ ಉದ್ಯೋಗಿಗಳಿಗೆ ತಿಳಿಸಿದ್ದಾರೆ.