ನವದೆಹಲಿ: SBI, HDFC, BoB ನಂತರ ಕೆನರಾ ಬ್ಯಾಂಕ್ ಕೂಡ ಸ್ಥಿರ ಠೇವಣಿ ದರಗಳನ್ನು ಹೆಚ್ಚಿಸಿದೆ. ಕೆನರಾ ಬ್ಯಾಂಕ್ ಗ್ರಾಹಕರಿಗೆ ತಮ್ಮ ನಿಶ್ಚಿತ ಠೇವಣಿ ಹೂಡಿಕೆಯ ಮೇಲಿನ ಬಡ್ಡಿ ದರ ಹೆಚ್ಚಿಸಿದ ಇತ್ತೀಚಿನ ಬ್ಯಾಂಕ್ ಆಗಿದೆ. ಸರ್ಕಾರಿ ಸ್ವಾಮ್ಯದ ಸಾಲದಾತ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಶೇ. 0.25 ಅಥವಾ 25 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಿಸಿದೆ.
ಹೊಸ ದರಗಳು ಮಾರ್ಚ್ 1, 2022 ರಿಂದ ಜಾರಿಗೆ ಬರುತ್ತವೆ ಎಂದು ದೇಶದ ಮೂರನೇ ಅತಿದೊಡ್ಡ ರಾಷ್ಟ್ರೀಕೃತ ಬ್ಯಾಂಕ್ ಹೇಳಿದೆ. 2 ಕೋಟಿ ರೂ.ಗಿಂತ ಕಡಿಮೆಯ ಸ್ಥಿರ ಠೇವಣಿ ಹೂಡಿಕೆಗಳಿಗೆ ಬಡ್ಡಿ ದರಗಳು ಅನ್ವಯಿಸುತ್ತವೆ.
ಕೆನರಾ ಬ್ಯಾಂಕ್ ಗಿಂತ ಮೊದಲು, ಹಲವಾರು ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ಬ್ಯಾಂಕ್‌ಗಳು ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರ ಹೆಚ್ಚಿಸಿವೆ. ಈ ಬ್ಯಾಂಕುಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI), ಬ್ಯಾಂಕ್ ಆಫ್ ಬರೋಡಾ (BOB), HDFC ಬ್ಯಾಂಕ್ ಮತ್ತು ICICI ಬ್ಯಾಂಕ್ ಸೇರಿವೆ.
ಹೂಡಿಕೆದಾರರು ಏಳರಿಂದ 45 ದಿನಗಳಲ್ಲಿ ಪಕ್ವವಾಗುವ ಸ್ಥಿರ ಠೇವಣಿ ಹೂಡಿಕೆಗಳಿಗೆ ಶೇ. 2.90 ರಷ್ಟು ಬಡ್ಡಿಯನ್ನು ಪಡೆಯುತ್ತಾರೆ. 46 ದಿನಗಳಿಂದ 90 ದಿನಗಳಲ್ಲಿ ಪಕ್ವವಾಗುವ FD ಹೂಡಿಕೆಗಳ ಮೇಲೆ ಬ್ಯಾಂಕ್ ಶೇ. 3.90ರಷ್ಟು ಬಡ್ಡಿದರ ನೀಡಲಾಗುವುದು.
ಇದಲ್ಲದೆ, ಕೆನರಾ ಬ್ಯಾಂಕ್ 180 ದಿನಗಳು ಅಥವಾ ಅದಕ್ಕಿಂತ ಕಡಿಮೆ ಅವಧಿಯ ಎಫ್.ಡಿ.ಗಳಿಗೆ ಶೇ. 4.40ರಷ್ಟು ಬಡ್ಡಿದರವನ್ನು ನೀಡುತ್ತದೆ. ಅಲ್ಲದೆ, ಗ್ರಾಹಕರು 2 ರಿಂದ 3 ವರ್ಷಗಳ ಅವಧಿಯ FD ಗಳ ಮೇಲೆ ಶೇಕಡ 5.20 ರ ಬಡ್ಡಿದರ ಪಡೆಯಬಹುದು.
ಕೆನರಾ ಬ್ಯಾಂಕ್ 2 ವರ್ಷಕ್ಕಿಂತ ಹೆಚ್ಚು ಆದರೆ 3 ವರ್ಷಕ್ಕಿಂತ ಕಡಿಮೆ ಅವಧಿಯ FD ಗಳ ಮೇಲೆ ಶೇ. 5.20ರಷ್ಟು ಬಡ್ಡಿದರವನ್ನು ನೀಡುತ್ತಿದೆ. ಅಲ್ಲದೆ, ಗ್ರಾಹಕರು 3 ವರ್ಷಗಳಿಗಿಂತ ಹೆಚ್ಚು ಆದರೆ 5 ವರ್ಷಗಳಿಗಿಂತ ಕಡಿಮೆ ಅವಧಿಯ FD ಗಳಿಗೆ ಶೇ. 5.25 ರ ಬದಲಿಗೆ ಶೇ. 5.45 ಬಡ್ಡಿದರದಲ್ಲಿ ಆದಾಯವನ್ನು ಪಡೆಯುತ್ತಾರೆ.
ಹಿರಿಯ ನಾಗರಿಕರು ಸ್ಥಿರ ಠೇವಣಿ ಹೂಡಿಕೆಯ ಮೇಲೆ ಹೆಚ್ಚಿನ ಬಡ್ಡಿ ದರವನ್ನು ಪಡೆಯುವುದನ್ನು ಮುಂದುವರಿಸುವುದಾಗಿ ಬ್ಯಾಂಕ್ ಘೋಷಿಸಿದೆ. ಹಿರಿಯ ನಾಗರಿಕರು ಮಾಡಿದ ಎಫ್‌ಡಿ ಹೂಡಿಕೆಯ ಮೇಲೆ ಬ್ಯಾಂಕ್ 50 ಬೇಸಿಸ್ ಪಾಯಿಂಟ್‌ಗಳು ಅಥವಾ ಶೇ. 0.5 ರಷ್ಟು ಹೆಚ್ಚಿನ ಬಡ್ಡಿ ದರ ನೀಡುತ್ತಿದೆ.