ಬೆಂಗಳೂರು: ಮೂರು ವರ್ಷದ ಹಿಂದೆ ಪ್ರಧಾನಿ ಮೋದಿ ಜಾರಿಗೆ ತಂದ ಮಹತ್ವಕಾಂಕ್ಷಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ರಾಜ್ಯದ ಹೆಚ್ಚಿನ ರೈತರಿಗೆ ಸರಿಯಾಗಿ ತಲುಪಿಲ್ಲ.
ಇದುವರೆಗೆ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 10 ಕಂತುಗಳ ಹಣ ಬಿಡುಗಡೆ ಮಾಡಿದೆ. ಆದರೆ, ರಾಜ್ಯದ ಹೆಚ್ಚಿನ ರೈತರಿಗೆ ಎರಡು ಅಥವಾ ಮೂರು ಕಂತು ಮಾತ್ರ ಜಮೆಯಾಗಿದೆ. ಉಳಿದ ಕಂತಿನ ಹಣ ಜಮಾ ಆಗಿಲ್ಲ. ರಾಜ್ಯ ಸರ್ಕಾರದ ಅನುಮೋದನೆ ಬಾಕಿ ಇರುವುದರಿಂದ ಸಮಸ್ಯೆ ಉಂಟಾಗಿದೆ ಎಂದು ಹೇಳಲಾಗಿದೆ.
ಕಿಸನ್ ಸಮ್ಮನ್ ನಿಧಿ ಯೋಜನೆಯಡಿ ರಾಜ್ಯದಲ್ಲಿ 57,85,288 ಫಲಾನುಭವಿಗಳಿದ್ದಾರೆ. 34,63,493 ರೈತರ ಖಾತೆಗೆ ಹಣ ಸಂದಾಯವಾಗಿದೆ. ಆಧಾರ್ ಜೋಡಣೆ ಪಹಣಿ ಸೇರಿದಂತೆ ದಾಖಲೆ ಸರಿಯಾಗಿದ್ದರೂ, 21,13,787 ರೈತರ ಖಾತೆಗೆ ಹಣ ಜಮಾ ಆಗಿಲ್ಲ. 3.36 ಲಕ್ಷ ರೈತರ ಪಹಣಿ, ಆಧಾರ್ ಸಮಸ್ಯೆಯನ್ನು ಅಧಿಕಾರಿಗಳು ಸರಿಪಡಿಸಿಲ್ಲ ಎಂದು ಹೇಳಲಾಗಿದೆ.
ಹೆಚ್ಚಿನ ರೈತರ ಆಧಾರ್, ಹೆಸರು, ಪಹಣಿ ಸೇರಿದಂತೆ ಎಲ್ಲ ಮಾಹಿತಿ ಸರಿ ಇದೆ. ಆದರೆ, pmkisan ವೆಬ್ಸೈಟ್ ನಲ್ಲಿ ರಾಜ್ಯದ ಅನುಮೋದನೆ ಬಾಕಿ ಇದೆ ಎಂದು ಬರೆಯಲಾಗಿದೆ. ರೈತರ ಖಾತೆಗೆ ಹಣ ಸಂದಾಯವಾಗಿದೆ ಎಂದು ವೆಬ್ಸೈಟ್ ನಲ್ಲಿ ತೋರಿಸಿದರೂ ರಾಜ್ಯ ಸರ್ಕಾರದ ಅನುಮೋದನೆ ಬಾಕಿ ಇದೆ ಎಂದು ಹೇಳಿರುವುದರಿಂದ ಖಾತೆಗೆ ಹಣ ಬಂದಿಲ್ಲ ಎನ್ನಲಾಗಿದೆ.
ಖಾತೆಗೆ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಹಣ ಪಾವತಿಯಾಗದ ರೈತರು, ನೋಂದಣಿ ಮತ್ತು ಮಾಹಿತಿ ವಿವರಗಳಿಗಾಗಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಧಿಕೃತ ವೆಬ್ಸೈಟ್ pmkisan.gov.in ಗಮನಿಸಬಹುದಾಗಿದೆ.