ಬೆಂಗಳೂರು: ರಸ್ತೆ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಘಟನೆಗೆ ಕಾರಣವಾದ ವಾಹನಕ್ಕೆ ವಿಮೆ ನವೀಕರಣವಾಗದಿದ್ದಲ್ಲಿ ಮಾಲೀಕರೇ ನಷ್ಟಕ್ಕೊಳಗಾದವರಿಗೆ ಪರಿಹಾರ ಕೊಡಬೇಕು ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ವಿಚಾರಣಾ ಕೋರ್ಟ್ ರಸ್ತೆ ಅಪಘಾತ ಪ್ರಕರಣದಲ್ಲಿ ವಾಹನದ ಮಾಲೀಕರೇ ಪರಿಹಾರ ನೀಡಬೇಕೆಂದು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೆ. ಸೋಮಶೇಖರ್, ಉಮೇಶ್ ಎಂ. ಅಡಿಗ ಅವರಿದ್ದ ಹೈಕೋರ್ಟ್ ವಿಭಾಗಿಯ ಪೀಠ ಈ ಆದೇಶ ನೀಡಿದೆ.
ರಸ್ತೆ ಅಪಘಾತ ನಡೆಯುವ ಮೊದಲೇ ವಿಮೆ ನವೀಕರಣವಾಗಿದ್ದರೂ ಘಟನೆ ನಡೆದ ಮರುದಿನದಿಂದ ಅದು ಅನ್ವಯವಾಗುವಂತಿದ್ದರೆ ವಿಮೆ ಕಂಪನಿಗೆ ಪರಿಹಾರ ನೀಡುವಂತೆ ಸೂಚನೆ ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಈ ಅಪಘಾತ ಪ್ರಕರಣದಲ್ಲಿ ಘಟನೆ ನಡೆದ ಸಮಯಕ್ಕಿಂತ ಐದು ಗಂಟೆ ಮೊದಲೇ ವಾಹನದ ವಿಮೆ ನವೀಕರಣ ಮಾಡಿಸಿದ್ದರೂ ಘಟನೆ ನಡೆದ ಮರುದಿನದಿಂದ ಅನ್ವಯವಾಗುತ್ತಿತ್ತು. ಹೀಗಾಗಿ ಘಟನೆಯಿಂದ ಮೃತಪಟ್ಟ ಕುಟುಂಬದವರಿಗೆ ಪರಿಹಾರ ನೀಡುವಂತೆ ವಿಮಾ ಕಂಪನಿಗೆ ನಿರ್ದೇಶನ ನೀಡಲಾಗದು ಎಂದು ಆದೇಶ ನೀಡಲಾಗಿದೆ.
ವಿಚಾರಣಾ ನ್ಯಾಯಾಲಯ ನೀಡಿದ್ದ ಪರಿಹಾರದ ಮೊತ್ತ 15.47 ಲಕ್ಷ ರೂಪಾಯಿಗಳನ್ನು 13.30 ಲಕ್ಷ ರೂಪಾಯಿಗಳಿಗೆ ಇಳಿಕೆ ಮಾಡಲಾಗಿದೆ.
2015 ಮೇ 28ರಂದು ಮೆಹತಾಬ್ ವುಲ್ಲಾ ಎಂಬುವರ ವಾಹನದಲ್ಲಿ ಸೈಯದ್ ಸಾದತ್ ವುಲ್ಲಾ ಹೋಗುವಾಗ ಅಪಘಾತ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಸೈಯದ್ ಸಾದತ್ ವುಲ್ಲಾ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯ ಮೃತಪಟ್ಟಿದ್ದರು. ವಿದ್ಯಾರ್ಥಿಯಾಗಿದ್ದ ಅವರು ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿಕೊಂಡು ತಿಂಗಳಿಗೆ 20,000 ರೂ. ದುಡಿಯುತ್ತಿದ್ದರು. ಅವರ ಪೋಷಕರಿಗೆ ಇದೇ ಜೀವನಾಧಾರವಾಗಿತ್ತು. ಹೀಗಾಗಿ 30 ಲಕ್ಷ ರೂಪಾಯಿ ಪರಿಹಾರ ಕೊಡಿಸಬೇಕೆಂದು ಪೋಷಕರು ಕೋರ್ಟ್ ಮೊರೆ ಹೋಗಿದ್ದರು.
ಪ್ರಕರಣದಲ್ಲಿ ಪ್ರತಿ ವಾದಿಯಾಗಿದ್ದ ವಾಹನದ ಮಾಲೀಕ ಮೆಹತಾಬ್ ವುಲ್ಲಾ ಆಕ್ಷೇಪ ವ್ಯಕ್ತಪಡಿಸಿ ವಾಹನಕ್ಕೆ ವಿಮೆ ಇದೆ. ಡಿಎಲ್ ಕೂಡ ಇದೆ. ಹೀಗಾಗಿ ವಿಮೆ ಕಂಪನಿ ಪರಿಹಾರ ನೀಡಬೇಕು. ತಮ್ಮ ವಿರುದ್ಧ ದಾಖಲಿಸಿದ ಪ್ರಕರಣ ರದ್ದುಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ. ಆದರೆ, ಇದನ್ನು ಒಪ್ಪದ ಕೋರ್ಟ್ ರಸ್ತೆ ಅಪಘಾತದ ಸಂದರ್ಭದಲ್ಲಿ ವಾಹನಕ್ಕೆ ವಿಮೆ ನವೀಕರಣವಾಗದ್ದಿದ್ದರೆ ಮಾಲೀಕರೇ ನಷ್ಟಕ್ಕೊಳಗಾದವರಿಗೆ ಪರಿಹಾರ ಕೊಡಬೇಕು ಎಂದು ಆದೇಶ ನೀಡಿದೆ.