ನವದೆಹಲಿ: ನಕಲಿ ಇನ್ವಾಯ್ಸಿಂಗ್ ಮೂಲಕ ತೆರಿಗೆ ವಂಚಿಸುವುದನ್ನು ತಡೆಯಲು ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ ಜಿಎಸ್ಟಿ ನಿಯಮಗಳಿಗೆ ತಿದ್ದುಪಡಿ ಮಾಡಿದೆ. ಅಂತೆಯೇ ಮಾಸಿಕ 50 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತದ ವಹಿವಾಟು ನಡೆಸುವವರು ಜಿಎಸ್ಟಿ ಹೊಣೆಗಾರಿಕೆಯ ಕನಿಷ್ಠ ಶೇಕಡ 1 ರಷ್ಟು ನಗದು ಕಡ್ಡಾಯವಾಗಿ ಪಾವತಿಸಬೇಕಿದೆ.
ಸರಕು ಮತ್ತು ಸೇವಾ ತೆರಿಗೆ ಹೊಣೆಗಾರಿಕೆಯ ಶೇಕಡ 1 ರಷ್ಟು ನಗದು ಪಾವತಿ ಕಡ್ಡಾಯವಾಗಿದ್ದು, ಸುಮಾರು 45 ಸಾವಿರ ತೆರಿಗೆ ಪಾವತಿದಾರರಿಗೆ ಇದು ಅನ್ವಯವಾಗುತ್ತದೆ. 2021 ರ ಜನವರಿ 1 ರಿಂದ ಹೊಸ ನಿಯಮ ಜಾರಿಯಾಗಲಿದೆ.
ಹೊಸ ನಿಯಮ ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ಬಳಕೆ ನಿರ್ಬಂಧಿಸುತ್ತದೆ. 1.2 ಕೋಟಿ ತೆರಿಗೆದಾರರಲ್ಲಿ ಸುಮಾರು 4 ಲಕ್ಷ ತೆರಿಗೆದಾರರು ಮಾತ್ರ ಮಾಸಿಕ ಪೂರೈಕೆ ಮೌಲ್ಯ 50 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತ ಹೊಂದಿರುತ್ತಾರೆ. ಇವರಲ್ಲಿ 1.5 ಲಕ್ಷ ತೆರಿಗೆದಾರರು ಜಿಎಸ್ಟಿ ಹೊಣೆಗಾರಿಕೆಯ ಶೇಕಡ 1 ಕ್ಕಿಂತ ಕಡಿಮೆ ಹಣವನ್ನು ನಗದು ರೂಪದಲ್ಲಿ ಪಾವತಿಸುತ್ತಿದ್ದಾರೆ. ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯಲ್ಲಿ ನೊಂದಣಿಯಾದ ಒಟ್ಟು ವ್ಯವಹಾರಗಳಲ್ಲಿ ಶೇಕಡ 0.37ರಷ್ಟು ಮಾತ್ರ ಶೇಕಡ 1 ರಷ್ಟು ನಗದು ಪಾವತಿ ಕಡ್ಡಾಯವಾಗಿದೆ ಎಂದು ಹೇಳಲಾಗಿದೆ.