ದಾವಣಗೆರೆ: ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ಪರಿಹಾರ ಮೊತ್ತವನ್ನು ಸಂರಕ್ಷಣೆ ತಂತ್ರಾಂಶ ಮೂಲಕ ನೀಡುವ ಸಂದರ್ಭಗಳಲ್ಲಿ ರೈತರು ಸಮರ್ಪಕವಾಗಿ ಆಧಾರ್ ಲಿಂಕ್ ಮಾಡಿಸದಿದ್ದರೆ ಕೆಲವು ತಾಂತ್ರಿಕ ತೊಂದರೆಗಳು ಎದುರಾಗುತ್ತಿವೆ.
ರೈತರು ಕೆಲವೊಮ್ಮೆ ಬಹು ಖಾತೆಗಳನ್ನು ಹೊಂದಿದ್ದು, ಈ ಖಾತೆಗಳಿಗೆ ಆಧಾರ್ ಲಿಂಕ್ ಮಾಡಿಸದೇ ಇದ್ದ ಸಂದರ್ಭದಲ್ಲಿ ಅಥವಾ ಆಧಾರ್ ಲಿಂಕ್ ಮಾಡಿಸಿದ್ದರೂ ಖಾತೆಗಳು ವರ್ಷಗಳಿಂದ ಉಪಯೋಗಿಸದೇ ಚಾಲ್ತಿಯಲ್ಲಿ ಇಲ್ಲದಿದ್ದರೆ ಈ ರೈತರ ಖಾತೆಗಳಿಗೆ ನಗದು ವರ್ಗಾಯಿಸುವಾಗ ಆಧಾರ್ ನಂಬರ್ನಲ್ಲಿ ತಪ್ಪು (Error in Aadhara Number), ಖಾತೆ ಇನ್ಆಕ್ಟಿವ್ (Account inactive), ಆಧಾರ್ ನಂಬರ್ ಖಾತೆಗೆ ಸೀಡ್ ಆಗಿರುವುದಿಲ್ಲ (Addhar not seeded) ಎಂಬ ತಾಂತ್ರಿಕ ತೊಂದರೆಗಳು ಎದುರಾಗುತ್ತಿರುತ್ತದೆ.
ಇದರಿಂದಾಗಿ ರೈತರು ಆಧಾರ್ ಸಂಖ್ಯೆಯನ್ನು ತಮ್ಮ ಬ್ಯಾಂಕ್ ಖಾತೆಗೆ ಜೋಡಣೆ ಮಾಡಿಸದೇ ಇದ್ದರೆ ಬೆಳೆ ವಿಮೆ ಪರಿಹಾರ ಇತ್ಯರ್ಥಪಡಿಸುವಲ್ಲಿ ಅನಗತ್ಯ ವಿಳಂಬವಾಗುತ್ತದೆ. ಆದುದರಿಂದ ಬೆಳೆ ವಿಮೆಗೆ ನೋಂದಾಯಿಸಿದ ರೈತರುಗಳು ಸಕಾಲದಲ್ಲಿ ಬೆಳೆ ವಿಮೆ ಪರಿಹಾರ ಇತ್ಯರ್ಥಪಡಿಸಲು ಅನುಕೂಲವಾಗುವಂತೆ ಕೂಡಲೇ ತಮ್ಮ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಿಸಿಕೊಳ್ಳಬೇಕೆಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.