
ನವದೆಹಲಿ: ಜಮೀನು, ನಿವೇಶನಗಳಿಗೆ ಆಧಾರ್ ಮಾದರಿಯಲ್ಲಿ ಗುರುತಿನ ಚೀಟಿ ನೀಡುವ ಯೋಜನೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಇದರಿಂದ ಭೂಮಿ ಒತ್ತುವರಿ, ಕಬಳಿಕೆ ಮೊದಲಾದವುಗಳಿಗೆ ಕಡಿವಾಣ ಹಾಕಬಹುದಾಗಿದೆ. 14 ಅಂಕಿಗಳನ್ನು ಒಳಗೊಂಡ ಯೂನಿಕ್ ಲ್ಯಾಂಡ್ ಪಾರ್ಸೆಲ್ ಐಡಿ ನಂಬರ್ ಗಳನ್ನು ದೇಶಾದ್ಯಂತ ಜಮೀನು, ನಿವೇಶನ, ಫ್ಲಾಟ್ ಗಳಿಗೆ ನೀಡಲಾಗುತ್ತದೆ.
ಆಧಾರ್ ಮಾದರಿಯ ವಿಶಿಷ್ಟ 14 ಡಿಜಿಟ್ ಗಳ ಸಂಖ್ಯೆ ನೀಡಲಾಗುವುದು. ಯೂನಿಕ್ ಲ್ಯಾಂಡ್ ಪಾರ್ಸೆಲ್ ಐಡೆಂಟಿಫಿಕೇಷನ್ ನಂಬರ್ ಭೂಮಾಲಿಕರಿಗೆ ನೀಡಲು ಸರ್ಕಾರ ಕ್ರಮ ಕೈಗೊಂಡಿದೆ. 2019 ರಲ್ಲಿ ದೇಶದ 10 ರಾಜ್ಯಗಳಲ್ಲಿ ಯೋಜನೆ ಜಾರಿಯ ಹಂತದಲ್ಲಿತ್ತು.
2022 ರ ಮಾರ್ಚ್ ಒಳಗೆ ಎಲ್ಲ ಕಡೆ ಯೋಜನೆ ಆರಂಭವಾಗಿ ಭೂದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಗುರಿ ಹೊಂದಲಾಗಿದೆ. ದಾಖಲೆಗಳಿಲ್ಲದ ಗ್ರಾಮೀಣ ಭೂಮಾಲೀಕರಿಗೆ ಇದರಿಂದ ಅನುಕೂಲವಾಗಲಿದೆ. ಜೊತೆಗೆ ಭೂಮಿ ಒತ್ತುವರಿ, ವಂಚನೆ ತಡೆಯಬಹುದಾಗಿದೆ. ಭೂಮಿಯ ಮಾಲೀಕತ್ವದ ಜೊತೆಗೆ ಆಧಾರ್ ಜೋಡಣೆ ಕೂಡ ಇದೇ ಸಂದರ್ಭದಲ್ಲಿ ಆರಂಭವಾಗಲಿದ್ದು, ಅದು ಐಚ್ಛಿಕವಾಗಿರುತ್ತದೆ.