ನವದೆಹಲಿ: ಆಧಾರ್ ಕಾರ್ಡ್ ಗೆ ಸಾಂವಿಧಾನಿಕ ಮಾನ್ಯತೆ ಎತ್ತಿಹಿಡಿದಿದ್ದ ಸುಪ್ರೀಂ ಕೋರ್ಟ್ ತೀರ್ಪು ಮರುಪರಿಶೀಲನೆ ಇಂದು ನಡೆಯಲಿದೆ. ಸುಪ್ರೀಂಕೋರ್ಟ್ ತೀರ್ಪನ್ನು ಮರು ಪರಿಶೀಲಿಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳ ಕುರಿತು ಸುಪ್ರೀಂಕೋರ್ಟ್ ಪಂಚ ಸದಸ್ಯ ಪೀಠ ಇಂದು ತೀರ್ಪು ನೀಡಲಿದೆ.
2018 ರ ಸೆಪ್ಟೆಂಬರ್ 26 ರಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿತ್ತು. ಅಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಐಟಿ ರಿಟರ್ನ್ಸ್ ಸಲ್ಲಿಕೆ ಮತ್ತು ಪ್ಯಾನ್ ಕಾರ್ಡ್ ಪಡೆಯಲು ಮಾತ್ರ ಆಧಾರ್ ಕಡ್ಡಾಯಗೊಳಿಸಿ, ಬ್ಯಾಂಕ್ ಖಾತೆ, ಟೆಲಿಕಾಂ ಸೇವೆ, ಶಾಲೆ ಪ್ರವೇಶಕ್ಕಾಗಿ ಆಧಾರ್ ಕಡ್ಡಾಯವಾಗಿ ಜೋಡಣೆ ಮಾಡಬೇಕಿಲ್ಲ ಎಂದು ಹೇಳಿದ್ದರು.
ಜನರ ಖಾಸಗಿತನದ ಹಕ್ಕು, ವೈಯಕ್ತಿಕ ಘನತೆ ಮಾಹಿತಿಯನ್ನು ಸಮತೋಲನದಲ್ಲಿ ನೋಡಲಾಗಿದೆ. ಜನರಿಗೆ ಸೌಲಭ್ಯ ಒದಗಿಸುವ ಉದ್ದೇಶವನ್ನು ಆಧಾರ್ ಕಾರ್ಡ್ ಹೊಂದಿದೆ. ಸೌಲಭ್ಯ ಮತ್ತು ಸಹಾಯಧನ ನೀಡಿಕೆ ಆಧಾರ್ ಸೀಮಿತವಾಗಬೇಕು ಎಂದು ಸುಪ್ರೀಂಕೋರ್ಟ್ ಹೇಳಿತ್ತು.
ಆಧಾರ್ ಕುರಿತಾಗಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಪೀಠ 4:1 ಬಹುಮತದಲ್ಲಿ ನೀಡಿದ್ದ ತೀರ್ಪಿನ ಸಮರ್ಪಕತೆಯನ್ನು ಸಲ್ಲಿಕೆಯಾಗಿರುವ ಮರುಪರಿಶೀಲನೆ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್, ಮಾನವ ಹಕ್ಕುಗಳ ಸಮಿತಿಯ ಮಾಜಿ ಅಧ್ಯಕ್ಷ ಶಾಂತ ಸಿನ್ಹಾ ಮೊದಲಾದವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಇಂದು ತೀರ್ಪು ಪ್ರಕಟಿಸಲಿದೆ ಎಂದು ಹೇಳಲಾಗಿದೆ.