ನವದೆಹಲಿ: ಸರ್ಕಾರಿ ಯೋಜನೆ ಸೌಲಭ್ಯ ಪಡೆಯುವುದು ಸೇರಿದಂತೆ ಅನೇಕ ಕೆಲಸ-ಕಾರ್ಯಗಳಿಗೆ ಆಧಾರ್ ಕಾರ್ಡ್ ಅನಿವಾರ್ಯವಾಗಿದೆ.
ಕೆಲವೊಮ್ಮೆ ಆಧಾರ್ ಕಾರ್ಡ್ ಗಳಲ್ಲಿ ಖಾಯಂ ವಿಳಾಸ ನೀಡಿದಾಗ ಸಮಸ್ಯೆಯಾಗುತ್ತದೆ. ಇನ್ನು ಮುಂದೆ ಆಧಾರ್ ಕಾರ್ಡ್ ಗೆ ಬಾಡಿಗೆ ಮನೆ ವಿಳಾಸವನ್ನು ಕೂಡ ನೀಡಬಹುದಾಗಿದೆ. ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಬಾಡಿಗೆದಾರರ ವಿಳಾಸ ನವೀಕರಿಸಲು ಹೊಸ ಪ್ರಕ್ರಿಯೆಯನ್ನು ಪರಿಚಯಿಸಿದ್ದು ಬಾಡಿಗೆ ಒಪ್ಪಂದ ಬಳಸಿಕೊಂಡು ಆಧಾರ್ ಕಾರ್ಡ್ ನಲ್ಲಿ ವಿಳಾಸವನ್ನು ಬದಲಿಸಬಹುದಾಗಿದೆ.
ಬಾಡಿಗೆ ಒಪ್ಪಂದದಲ್ಲಿ ಇರುವ ಹೆಸರು ಆಧಾರ್ ಕಾರ್ಡ್ ನಲ್ಲಿರುವ ಹೆಸರಿನಂತೆ ಇರಬೇಕು. ಆನ್ಲೈನ್ ನಲ್ಲಿ ವಿಳಾಸ ಬದಲಾವಣೆ ಮಾಡಬಹುದು. ಮೊದಲು ಬಾಡಿಗೆ ಒಪ್ಪಂದ ಸ್ಕ್ಯಾನ್ ಮಾಡಿ ಬಳಿಕ ಪಿಡಿಎಫ್ ಮಾಡಬೇಕು. ನಂತರ ಗುರುತಿನ ಚೀಟಿ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ https://uidai.gov.in ಗೆ ಹೋಗಿ ಅಲ್ಲಿ ವಿಳಾಸದ ನವೀಕರಣದ ಮೇಲೆ ಕ್ಲಿಕ್ ಮಾಡಬೇಕು. ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಿ ಲಾಗಿನ್ ಮಾಡಬೇಕು. ಬಳಿಕ ಓಟಿಪಿ ಮೊಬೈಲ್ ಗೆ ಬರುತ್ತದೆ. ಅದನ್ನು ನಮೂದಿಸಿ ವಿಳಾಸವನ್ನು ಬದಲಾವಣೆ ಮಾಡಬಹುದು.
ಆಫ್ ಲೈನ್ ನಲ್ಲಿ ಕೂಡ ವಿಳಾಸ ಬದಲಿಸಬಹುದು. ಆಧಾರ್ ಕೇಂದ್ರದಿಂದ ಆಧಾರ್ ನವೀಕರಣ ಅಥವಾ ತಿದ್ದುಪಡಿ ಫಾರಂ ಪಡೆದು ಅಗತ್ಯವಿರುವ ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿ ಅದರಲ್ಲಿ ವಿಳಾಸ ನವೀಕರಣ ನಮೂದಿಸಬೇಕು. ಆಧಾರ್ ಕಾರ್ಡ್ ಜೆರಾಕ್ಸ್ ಕಾಪಿ ಜೊತೆಗೆ ಪಾನ್ ಕಾರ್ಡ್, ಬಾಡಿಗೆ ಪತ್ರ, ವೋಟರ್ ಐಡಿ ಅಥವಾ ಪಾಸ್ಪೋರ್ಟ್ ನೀಡಿ ವಿಳಾಸ ಬದಲಿಸಿಕೊಳ್ಳಬಹುದು. ಇದಕ್ಕಾಗಿ 50 ರೂಪಾಯಿಗೆ ನೀಡಬೇಕಿದೆ ಎಂದು ಹೇಳಲಾಗಿದೆ.