ಬೆಂಗಳೂರು: ವಿಧಾನಸಭೆ ಕಲಾಪದ ವೇಳೆ ಬಿಜೆಪಿ ಸದಸ್ಯರು ಹೈಡ್ರಾಮಾ ಮಾಡಿದ ಘಟನೆ ನಡೆದಿದೆ. ವಿಧೇಯಕಗಳನ್ನು ಹರಿದು ಡೆಪ್ಯೂಟಿ ಸ್ಪೀಕರ್ ಮೇಲೆಯೇ ಕಾಗದಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರು, ನಿನ್ನೆ ನಡೆದ ವಿಪಕ್ಷ ನಾಯಕರ ಸಭೆಗೆ ಸರ್ಕಾರ ಶಿಷ್ಠಾಚಾರ ಉಲ್ಲಂಘನೆ ಮಾಡಿ ಐಎಎಸ್ ಅಧಿಕಾರಿಗಳನ್ನು ನೇಮಿಸಿದೆ ಎಂದು ಆರೋಪಿಸಿ ಸದನದ ಬಾವಿಗಿಳಿದು ಪ್ರತಿಭಟಿಸಲು ಮುಂದಾದರು. ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಬಿಜೆಪಿ ವಿರುದ್ಧ ಘೋಷಣೆ ಕೂಗಿದರು.
ಈ ವೇಳೆ ಮಾಜಿ ಸಚಿವ ಆರ್.ಅಶೋಕ್, ಅಶ್ವತ್ಥನಾರಾಯಣ ಸೇರಿದಂತೆ ಬಿಜೆಪಿ ಸದಸ್ಯರು ವಿಧೇಯಕಗಳನ್ನು ಹರಿದು ಹಾಕಿ ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ ಮೇಲೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸದಸ್ಯರ ವರ್ತನೆಗೆ ಗರಂ ಆದ ಡೆಪ್ಯೂಟಿ ಸ್ಪೀಕರ್, ಬಿಜೆಪಿ ನಾಯಕರು ಕಲಾಪ ಹಾಳು ಮಾಡಬೇಕು ಎಂಬ ದುರುದ್ದೇಶದಿಂದಲೇ ಈ ರೀತಿ ಮಾಡುತ್ತಿರುವುದು ಸರಿಯಲ್ಲ. ಜವಾಬ್ದಾರಿಯುತವಾಗಿ ನಡೆದುಕೊಳ್ಳುವಂತೆ ಸೂಚಿಸಿದರು. ಆದರೂ ಬಗ್ಗದ ಬಿಜೆಪಿ ಸದಸ್ಯರು ವಿದೇಯಕದ ಕಾಗದಗಳನ್ನು ಚೂರು ಚೂರು ಮಾಡಿ ಡೆಪ್ಯೂಟಿ ಸ್ಪೀಕರ್ ಅತ್ತ ಎಸೆದಿದ್ದಾರೆ. ವಿಧಾನಸಭೆಯ ಸಿಬ್ಬಂದಿಗಳು ಡೆಪ್ಯೂಟಿ ಸ್ಪೀಕರ್ ಟೇಬಲ್ ಮೇಲೆ ಬಿದ್ದ ಕಾಗದದ ಚೂರುಗಳನ್ನು ಸ್ವಚ್ಛಗೊಳಿಸಿದ ಪ್ರಸಂಗ ನಡೆದಿದೆ.