ಮಹಾರಾಷ್ಟ್ರದಲ್ಲಿ ಕೊರೊನಾ ಲಾಕ್ ಡೌನ್ ಹಂತಹಂತವಾಗಿ ಸಡಿಲಿಕೆಯಾಗಿದ್ದು, ಜನ ಜೀವನ ಸಹಜ ಸ್ಥಿತಿಗೆ ಬರುತ್ತಿದೆ. ಆದರೆ ಕೊಲ್ಲಾಪುರದ ಕ್ಷೌರಿಕರೊಬ್ಬರು ತಮ್ಮದೇಯಾದ ರೀತಿಯಲ್ಲಿ ಲಾಕ್ ಡೌನ್ ಸಡಿಲಿಕೆಯನ್ನು ಸಂಭ್ರಮಿಸಿದ್ದಾರೆ.
ಹೌದು, 52 ವರ್ಷದ ರಾಮ್‌ಭೂ ಸನ್ಕಲ್ಪ್ ತಮ್ಮ ಕಟ್ಟಿಂಗ್ ಶಾಪ್‌ಗೆ ಆಗಮಿಸಿದ ಮೊದಲ ಗ್ರಾಹಕರಿಗೆ ಬಂಗಾರದ ಕತ್ತರಿ ಹಾಗೂ ಕೆಲ ಸಲಕರಣೆಗಳಿಂದ ಕಟ್ಟಿಂಗ್ ಮಾಡುವ ಮೂಲಕ, ಅಚ್ಚರಿ ಮೂಡಿಸಿದ್ದಾರೆ. ಅವರ ಅಂಗಡಿಗೆ ಆಗಮಿಸಿದ ಮೊದಲ ವ್ಯಕ್ತಿಗೆ ಮಾತ್ರ ಇದು ಲಭ್ಯವಿತ್ತು ಎಂದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಕಳೆದ ಮೂರು ತಿಂಗಳಿನಿಂದ ಲಾಕ್‌ಡೌನ್‌ನಿಂದ ಅನೇಕ ಕ್ಷೌರಿಕ ಕುಟುಂಬಗಳು ಬೀದಿಗೆ ಬಂದಿವೆ. ಆದರೆ ದೇವರ ದಯದಿಂದ ನಾವು ಮತ್ತೊಮ್ಮೆ ಅಂಗಡಿಯನ್ನು ಆರಂಭಿಸಲು ಸಾಧ್ಯವಾಗಿದೆ. ಆದ್ದರಿಂದ ಇದನ್ನು ಸಂಭ್ರಮಿಸಲು ಈ ರೀತಿ ಬಂಗಾರದ ಕತ್ತರಿ ಬಳಸಿ ಕಟ್ಟಿಂಗ್ ಮಾಡಿದೆ ಎಂದಿದ್ದಾರೆ. 10 ಗ್ರಾಂ ತೂಕದ ಬಂಗಾರದ ಕತ್ತರಿಯನ್ನು ತಮ್ಮ ಕ್ಷೌರಿಕ ವೃತ್ತಿಯಿಂದ ಉಳಿಸಿದ ಸೇವಿಂಗ್ಸ್‌ನಿಂದ ಖರೀದಿಸಲಾಗಿತ್ತು ಎಂದಿದ್ದಾರೆ.