ಪಶ್ಚಿಮ ಬಂಗಾಳದ ರಸ್ತೆ ಬದಿ ಇರುವ ಈ ಟೀ ಅಂಗಡಿಯಲ್ಲಿ ಒಂದು ಲೋಟ ಚಹಾ ಕುಡಿಯಬೇಕೆಂದರೆ ನೀವು 1 ಸಾವಿರ ರೂಪಾಯಿ ಕೊಡಬೇಕು. ಇಲ್ಲಿ ಸಿಗದ ಚಹಾ ಇಲ್ಲವೇ ಇಲ್ಲ. ಜಗತ್ತಿನಲ್ಲಿ ಸಿಗುವ ಎಲ್ಲ ಚಹಾಗಳೂ ಇದೊಂದೇ ಜಾಗದಲ್ಲಿ ಸಿಗುತ್ತದೆ. ಹೀಗಾಗಿ ಇಲ್ಲಿನ ಚಹಾಕ್ಕೆ ಬೆಲೆ ಜಾಸ್ತಿಯಾದರೂ ಗ್ರಾಹಕರು ಟೀ ಕುಡಿಯದೆ ಮಾತ್ರ ತೆರಳುವುದಿಲ್ಲ.
ಇದು ಪಾರ್ಥ ಬಾಬು ಎಂದೇ ಹೆಸರು ಗಳಿಸಿರುವ ಪಾರ್ಥಪ್ರತಿಮ್ ಗಂಗೂಲಿ ಅವರ ಟೀ ಅಂಗಡಿ. ಚಹಾ ಪ್ರಿಯರಾಗಿದ್ದ ಪಾರ್ಥ, ಉತ್ತಮ ಸಂಬಳ ಬರುತ್ತಿದ್ದ ಕೆಲಸ ಬಿಟ್ಟು, ಯಾವುದೇ ಟೀ ಬಾರ್ ಗೆ ಕಡಿಮೆ ಇಲ್ಲದಂತೆ ಒಂದು ಟೀ ಅಂಗಡಿ ಹೂಡಿದರು.
ಸುಮಾರು 115 ಬಗೆಯ ಟೀ ಇಲ್ಲಿ ಸಿಗುತ್ತದೆ. ದುಬಾರಿಯ ಬೆಲೆಯ ಜಪಾನ್ ಸಿಲ್ವರ್ ನೀಡಲ್ ವೈಟ್ ಟೀ, ಕೆ.ಜಿ.ಗೆ 50 ಸಾವಿರ ರೂ.ಗಳಿಂದ 35 ಲಕ್ಷ ರೂ.ವರೆಗೆ ಬೆಲೆ ಬಾಳುವ ಬೋ-ಲೇ ಟೀ, 14 ಸಾವಿರ ರೂ.ಗಳ ಚಮೋಮೈಲ್, 7,500 ರೂ.ಗಳ ಹೈಬಿಸ್ಕಸ್, 20,000 ರೂ.ಗಳ ರೂಬಿಯಸ್, ಬೈ ಮುಂಡನ್, 16,000 ರೂ. ಮೌಲ್ಯದ ಲ್ಯಾವೆಂಡರ್ ಟೀ ಹೀಗೆ ಜಗತ್ತಿನ ವಿವಿಧ ಪ್ರದೇಶದ ವಿಭಿನ್ನ ಟೀ ಇಲ್ಲಿ ತಯಾರಾಗುತ್ತದೆ.
ಅಲ್ಲದೆ, ಚಾಕೊಲೇಟ್ ಟೀ, ಮೆಕ್ಕೆಜೋಳದ ಟೀ, ವೈಟ್ ಟೀ, ಬ್ಲ್ಯು ಟೀ……ಹೀಗೆ ತರಹೇವಾರಿ ಚಹಾ ಘಮಗುಡುತ್ತದೆ. ಈ ದಾರಿಯಲ್ಲಿ ಹೋಗುವರು ಒಂದು ಲೋಟ ಟೀ ಹೀರಿಯೇ ಮುಂದೆ ಹೋಗುತ್ತಾರೆ. ಇನ್ನು ಹೊಸಬರು ರುಚಿ ನೋಡಲೆಂದೇ ಬರುತ್ತಾರೆ.
ಜಪಾನ್ ಸ್ಪೆಷಲ್ ಸಿಲ್ವರ್ ನೀಡಲ್ ವೈಟ್ ಟೀ ಪುಡಿ 1 ಕೆ.ಜಿ. ಗೆ 2.50 ಲಕ್ಷ ರೂ. ಇದೆ. ಹೀಗಾಗಿ 1 ಲೋಟ ಟೀ ಗೆ 1 ಸಾವಿರ ರೂ. ದರ ನಿಗದಿಪಡಿಸಿದ್ದರೂ ಯಾವ ಗ್ರಾಹಕರು ಕೇಳದೆ ಕುಡಿಯುತ್ತಾರೆ ಎನ್ನುತ್ತಾರೆ ಪಾರ್ಥ ಬಾಬು.