ನವದೆಹಲಿ: ದೇಶದ ಶೇ.88 ರಷ್ಟು ಉದ್ಯೋಗಿಗಳು ವರ್ಕ್ ಫ್ರಂ ಹೋಂ ವ್ಯವಸ್ಥೆಗೆ ಒಗ್ಗಿಕೊಂಡಿದ್ದಾರೆ ಎಂದು ಅಧ್ಯಯನವೊಂದು ಹೇಳಿದೆ.
ಎಕ್ಸ್ ಪೆನ್ಸ್ ಟ್ರಾವೆಲ್ ಇನ್ವಾಯ್ಸ್ ಮ್ಯಾನೇಜ್ಮೆಂಟ್ ಸೊಲ್ಯೂಶನ್ ಪ್ರೊವೈಡರ್(ಸಾಪ್) ಎಂಬ ಸಂಸ್ಥೆ ಈ ಕುರಿತು ಅಧ್ಯಯನವೊಂದನ್ನು ನಡೆಸಿದೆ.
ಶೇ.69 ಜನರು ವರ್ಕ್ ಫ್ರಂ ಹೋಂನಿಂದ ನಮ್ಮ ಕೆಲಸದ ಸಾಮರ್ಥ್ಯ ಹೆಚ್ಚಿದೆ ಎಂದು ಹೇಳಿಕೊಂಡಿದ್ದಾರೆ. ಶೇ. 11 ರಷ್ಟು ಸಂಸ್ಥೆಗಳು ಮಾತ್ರ ಬುಡದಿಂದ ಕೊನೆಯವರೆಗೂ ಡಿಜಿಟಲ್ ಪೇಮೆಂಟ್ ವ್ಯವಸ್ಥೆಯನ್ನು ಹೊಂದಿವೆ. ಶೇ.36 ರಷ್ಟು ಕಂಪನಿಗಳು ಇನ್ನೂ ತಮ್ಮ ವ್ಯವಹಾರದ ಖರ್ಚು ಪಾವತಿಗೆ ಮ್ಯಾನ್ಯುವಲ್ ವ್ಯವಸ್ಥೆಯನ್ನು ಹೊಂದಿವೆ.
ಈ ಹಳೆಯ ವ್ಯವಸ್ಥೆಯಿಂದ ಉತ್ಪಾದಕತೆಯ ಮೇಲೆ ಹೊಡೆತ ಬೀಳುತ್ತಿದೆ. ದೇಶದಲ್ಲಿ ಪ್ರತಿ ವರ್ಷ ಏನಿಲ್ಲವೆಂದರೂ 2.25 ಡಾಲರ್ ನಷ್ಟು ನಷ್ಟ ಮ್ಯಾನ್ಯುವಲ್ ವ್ಯವಸ್ಥೆ ಬಳಕೆಯಿಂದ ಉಂಟಾಗುತ್ತಿದೆ ಎಂದು ಅಧ್ಯಯನ ಹೇಳಿದೆ.
“ಖರ್ಚು, ವೆಚ್ಚ ಹಾಗೂ ಸರಕುಗಳ ಪಟ್ಟಿಯಲ್ಲಿ ಡಿಜಿಟಲ್ ವ್ಯವಸ್ಥೆ ಜಾರಿಗೆ ತಂದರೆ ಉದ್ಯಮದ ಮೇಲೆ ದ್ವಿಗುಣ ಪರಿಣಾಮ ಬೀರಲಿದ್ದು, ಜೊತೆಗೆ ವೆಚ್ಚ ಕಡಿತ ಕೂಡ ಆಗಲಿದೆ. ಉದ್ಯಮದಲ್ಲಿ ಚುರುಕು ಮೂಡಲಿದೆ” ಎಂದು ಸಾಪ್ ನ ಭಾರತೀಯ ಉಪ ಖಂಡದ ಎಂಡಿ ಮಾನಕಿರಣ ಚೌಹಾಣ್ ಅಭಿಪ್ರಾಯಪಟ್ಟಿದ್ದಾರೆ.
ಅಧ್ಯಯನ, ಪ್ರಸ್ತುತ ಖರ್ಚು ನಿರ್ವಹಣಾ ವ್ಯವಸ್ಥೆ ಹಾಗೂ ಆಧುನಿಕ ಪದ್ಧತಿಯ ಮೇಲೆ ಬೆಳಕು ಚೆಲ್ಲಿದೆ.. ಶೇ. 39 ಕಂಪನಿಗಳು ಖರ್ಚು ನಿರ್ವಹಣೆಗೆ ತಮ್ಮದೇ ಆದ ಆ್ಯಪ್ ಹೊಂದಿವೆ. ಶೇ. 76 ರಷ್ಟು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮೊಬೈಲ್ ಬಿಲ್ ನಲ್ಲಿ ಸಬ್ಸಿಡಿ ಅಥವಾ ಸಂಪೂರ್ಣವಾಗಿ ಪಾವತಿ ಮಾಡುತ್ತವೆ. ಶೇ. 76 ರಷ್ಟು ಉದ್ಯೋಗಿಗಳು ತಮ್ಮ ಕಂಪನಿಯ ಕೆಲಸ ಹಾಗೂ ಅದರಿಂದ ಸಿಗುವ ವೇತನದಿಂದ ಸಮಾಧಾನಿತರಾಗಿದ್ದಾರೆ.