
ಕೊರೊನಾ ಇಡೀ ವಿಶ್ವದ ಆರ್ಥಿಕ ಪರಿಸ್ಥಿತಿಯನ್ನು ಹಾಳು ಮಾಡಿದೆ. ಕೊರೊನಾದಿಂದಾಗಿ ಕಳೆದ 6 ತಿಂಗಳಿಂದ ಚಿಲ್ಲರೆ ವ್ಯಾಪಾರಿಗಳ ಬದುಕು ಕಷ್ಟವಾಗಿದೆ. ಹಬ್ಬದ ಋತುವಿನ ಮೇಲೆ ಅವರ ನಿರೀಕ್ಷೆಯಿದೆ.
ಹಬ್ಬ ಚಿಲ್ಲರೆ ವ್ಯಾಪಾರಿಗಳ ಬದುಕಿನಲ್ಲಿ ಸಣ್ಣ ಬೆಳಕು ತರಬಹುದೆಂಬ ಆಶಯ ಹೊಂದಿದ್ದಾರೆ. ಸರ್ವೆಯೊಂದು ವ್ಯಾಪಾರಿಗಳಿಗೆ ಖುಷಿ ಸುದ್ದಿ ನೀಡಿದೆ.
ಆರ್‌ಐಐ ಮತ್ತು ಲಿಟ್‌ಮಸ್‌ವರ್ಲ್ಡ್ ಸಮೀಕ್ಷೆ ನಡೆಸಿದೆ. ಸುಮಾರು ಶೇಕಡಾ 80 ರಷ್ಟು ಭಾರತೀಯ ಗ್ರಾಹಕರು ಮುಂಬರುವ ಹಬ್ಬದ ಋತುವಿನಲ್ಲಿ ಉತ್ಪನ್ನಗಳನ್ನು ಖರೀದಿಸಲು ಉತ್ಸುಕರಾಗಿದ್ದಾರೆ ಎಂದು ಸಮೀಕ್ಷೆಯಲ್ಲಿ ಗೊತ್ತಾಗಿದೆ.
ಶೇ. 75 ರಷ್ಟು ಗ್ರಾಹಕರು ಆನ್‌ಲೈನ್ ಶಾಪಿಂಗ್ ಗೆ ಆಸಕ್ತಿ ತೋರಿಸಿದ್ದಾರೆ. ಶೇಕಡಾ 66 ರಷ್ಟು ಜನರು ಅಂಗಡಿಗಳಲ್ಲಿ ಶಾಪಿಂಗ್ ಮಾಡುವುದಾಗಿ ಹೇಳಿದ್ದಾರೆ. ಶೇಕಡಾ 37ರಷ್ಟು ಜನರು ಮಾಲ್‌ಗೆ ಹೋಗುವುದಾಗಿ ಹೇಳಿದ್ದಾರೆ. ಆನ್ಲೈನ್ ಖರೀದಿಗೆ ಜನರು ಹೆಚ್ಚು ಆಸಕ್ತಿ ತೋರಿಸಿದ್ದಾರೆ. ಚಿಲ್ಲರೆ ವ್ಯಾಪಾರಿಗಳು ಕೂಡ ಹಬ್ಬಕ್ಕೆ ತಯಾರಾಗಿದ್ದು, ಹೆಚ್ಚು ಆಶಾಭಾವ ಹೊಂದಿದ್ದಾರೆಂದು ಆರ್ ಎ ಐ ಸಿಇಒ ರಾಜಗೋಪಾಲನ್ ಹೇಳಿದ್ದಾರೆ. ಗ್ರಾಹಕರು ಕೊರೊನಾ ಮಧ್ಯೆಯೇ ಮತ್ತೆ ಹಳೆ ಜೀವನಕ್ಕೆ ವಾಪಸ್ ಆಗಲು ಇಚ್ಛಿಸುತ್ತಿದ್ದಾರೆ. ನಿಧಾನವಾಗಿ ಶಾಪಿಂಗ್ ಗೆ ತೆರಳುತ್ತಿದ್ದಾರೆಂದು ಅವರು ಹೇಳಿದ್ದಾರೆ.
ಸಂಬಂಧಿಕರು, ಸ್ನೇಹಿತರ ಜೊತೆ ಬೆರೆಯಲು, ಉಡುಗೊರೆ ನೀಡಲೂ ಜನರು ಆಸಕ್ತರಾಗಿದ್ದಾರೆ. ಶೇಖಡಾ 53 ರಷ್ಟು ಜನರು ಉಡುಪು ಖರೀದಿಸಲು ಬಯಸಿದ್ರೆ ಶೇಕಡಾ 47 ರಷ್ಟು ಜನರು ಗೃಹೋಪಯೋಗಿ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ಸ್ ವಸ್ತು ಖರೀದಿಸಲು ಆಸಕ್ತರಾಗಿದ್ದಾರೆ. ಗ್ರಾಹಕರು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಮೊಬೈಲ್ ವ್ಯಾಲೆಟ್ ಮತ್ತು ಯುಪಿಐನಂತಹ ಡಿಜಿಟಲ್ ವಿಧಾನಗಳ ಮೂಲಕ ಪಾವತಿಸಲು ಬಯಸುತ್ತಿದ್ದಾರೆ.