ಕೊರೊನಾ ಸಂದರ್ಭದಲ್ಲಿ ಜನರಿಗೆ ನೆರವಾಗಲೆಂದು ಕೇಂದ್ರ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಆದ್ರೆ ಕೊರೊನಾ ಬಿಕ್ಕಟ್ಟಿನ ವೇಳೆ ಸರ್ಕಾರ ಜಾರಿಗೆ ತಂದ ಎಂಎಸ್ಎಂಇ ಹಾಗೂ ಸ್ಟಾರ್ಟ್ ಅಪ್ ಯೋಜನೆಗಳಿಂದ ಜನರಿಗೆ ಲಾಭವಾಗಿಲ್ಲವಂತೆ.
ಸಾಮಾಜಿಕ ಮಾಧ್ಯಮಗಳ ವೇದಿಕೆ ಲೋಕಲ್ ಸರ್ಕಲ್ಸ್ ನಡೆಸಿದ ಸಮೀಕ್ಷೆಯಲ್ಲಿ ಇದು ಬಹಿರಂಗವಾಗಿದೆ.
ಸಮೀಕ್ಷೆಯಲ್ಲಿ ಶೇಕಡಾ 68ರಷ್ಟು ಮಂದಿ ಸರ್ಕಾರದ ಎಂಎಸ್ಎಂಇ, ಸ್ಟಾರ್ಟ್ ಅಪ್ ಇಂಡಿಯಾ ಯೋಜನೆಯಿಂದ ಲಾಭ ಪಡೆದಿಲ್ಲ ಎಂಬುದು ಗೊತ್ತಾಗಿದೆ. ಇದ್ರಲ್ಲಿ ಕಳೆದ 12 ತಿಂಗಳಿಂದ ಸರ್ಕಾರ ಜಾರಿಗೆ ತಂದ ಕಡಿಮೆ ಬಡ್ಡಿ ದರದ ಯೋಜನೆ, ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ್ ಭಾರತ್ ಕೂಡ ಸೇರಿವೆ.
ಡಿಸೆಂಬರ್ ಅಂತ್ಯದಲ್ಲಿ ಲೋಕಲ್ ಸರ್ಕಲ್ಸ್, ಪಲ್ಸ್ ಆಫ್ ದಿ ಸ್ಟಾರ್ಟ್ ಅಪ್ ಆಂಡ್ ಎಂಎಸ್ಎಂಇ 2021 ಆವೃತ್ತಿಯನ್ನು ಮುಕ್ತಾಯಗೊಳಿಸಿದೆ. ಈ ವೇಳೆಗೆ 8 ಸಾವಿರಕ್ಕೂ ಹೆಚ್ಚು ಸ್ಟಾರ್ಟ್ ಅಪ್, ಎಂಎಸ್ಎಂಇಯ 20,000 ಕ್ಕೂ ಹೆಚ್ಚು ಪ್ರತಿಕ್ರಿಯೆಯನ್ನು ಸ್ವೀಕರಿಸಲಾಗಿತ್ತು. ಇದ್ರಲ್ಲಿ ಕಂಪನಿಗಳ ಸ್ಥಿರ ಸವಾಲು, ನೇಮಕಾತಿ ಯೋಜನೆ, ಮುಂದಿನ ಯೋಜನೆ, ಹಣದ ಹರಿವಿನ ಬಗ್ಗೆ ಮಾಹಿತಿ ಪಡೆಯಲಾಗಿದೆ.
ಸ್ಟಾರ್ಟ್ ಅಪ್ ಹಾಗೂ ಎಂಎಸ್ಎಂಇಗಳಿಗೆ ಆರ್ಥಿಕ ಸಹಾಯ ಪ್ರಮುಖ ಸಮಸ್ಯೆಯಾಗಿದೆ ಎಂದು ಸಮೀಕ್ಷೆ ಹೇಳಿದೆ. ಶೇಕಡಾ 28ರಷ್ಟು ಮಂದಿ ಹಣದ ಸಮಸ್ಯೆ ಹೇಳಿದ್ರೆ ಶೇಕಡಾ 25ರಷ್ಟು ಮಂದಿ ಬೆಳವಣಿಗೆ ಮುಂದಿನ ಸವಾಲು ಎಂದಿದ್ದಾರೆ. ಶೇಕಡಾ 19ರಷ್ಟು ಮಂದಿಗೆ ವ್ಯವಹಾರ ಉಳಿಸಿಕೊಳ್ಳುವ ಚಿಂತೆಯಾಗಿದೆ. ಕೇಂದ್ರ ಪ್ರಾರಂಭಿಸಿದ ಯೋಜನೆಗಳ ಲಾಭವನ್ನು ಶೇಕಡಾ 21ರಷ್ಟು ಎಂಎಸ್ಎಂಇಗಳು ಮಾತ್ರ ಪಡೆದಿವೆ. 2021ರಲ್ಲಿ ಶೇಕಡಾ 44ರಷ್ಟು ಮಂದಿ ನೌಕರರ ನೇಮಕಕ್ಕೆ ಒಲವು ತೋರಿಸಿದ್ದಾರೆ.