ನವದೆಹಲಿ: ಅಟಲ್ ಪಿಂಚಣಿ ಯೋಜನೆ(ಎಪಿವೈ) ಪ್ರಾರಂಭವಾದಾಗಿನಿಂದ ಆರೂವರೆ ವರ್ಷಗಳ ಅವಧಿಯಲ್ಲಿ 3.68 ಕೋಟಿ ನೋಂದಣಿಗಳೊಂದಿಗೆ ಗಣನೀಯವಾಗಿ ಏರಿಕೆ ಕಂಡಿದೆ.
65 ಲಕ್ಷಕ್ಕೂ ಹೆಚ್ಚು ಚಂದಾದಾರರು ನೋಂದಾಯಿಸಿಕೊಂಡಿರುವುದರಿಂದ ಈ ಹಣಕಾಸು ವರ್ಷದಲ್ಲಿ ಕಾರ್ಯಕ್ಷಮತೆ ಉತ್ತಮವಾಗಿದೆ. ಇದು ಯೋಜನೆ ಪ್ರಾರಂಭವಾದ ನಂತರ ಅದೇ ಅವಧಿಯಲ್ಲಿ ಇದುವರೆಗಿನ ಅತಿ ಹೆಚ್ಚು ನೋಂದಣಿಯಾಗಿದೆ. 56:44 ರ ಪುರುಷ ಮತ್ತು ಸ್ತ್ರೀ ಚಂದಾದಾರಿಕೆ ಅನುಪಾತ ಸುಧಾರಿಸುತ್ತಿದೆ.
APY ಭಾರತ ಸರ್ಕಾರದ ಪ್ರಮುಖ ಸಾಮಾಜಿಕ ಭದ್ರತಾ ಯೋಜನೆಯನ್ನು 2015ರ ಮೇ 9 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಶೇಷವಾಗಿ ಅಸಂಘಟಿತ ವಲಯಗಳಲ್ಲಿನ ನಾಗರಿಕರಿಗೆ ವೃದ್ಧಾಪ್ಯ ಆದಾಯ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಪ್ರಾರಂಭಿಸಿದರು.
ಅಟಲ್ ಪಿಂಚಣಿ ಯೋಜನೆಯನ್ನು ನಿರ್ವಹಿಸುವ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಪಿಎಫ್ಆರ್ಡಿಎ) ಅಧ್ಯಕ್ಷ ಸುಪ್ರತಿಮ್ ಬಂಡೋಪಾಧ್ಯಾಯ ಅವರು ಮಾತನಾಡಿ, ಸಮಾಜದ ಅತ್ಯಂತ ದುರ್ಬಲ ವರ್ಗಗಳನ್ನು ಪಿಂಚಣಿ ವ್ಯಾಪ್ತಿಗೆ ತರುವ ಈ ಸಾಧನೆಯು ಅವಿರತ ಪ್ರಯತ್ನದಿಂದ ಮಾತ್ರ ಸಾಧ್ಯವಾಗಿದೆ. ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್ ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳು, ಪಾವತಿ ಬ್ಯಾಂಕ್ ಗಳು, ಸಣ್ಣ ಹಣಕಾಸು ಬ್ಯಾಂಲಕ್ ಗಳು, ಸಹಕಾರಿ ಬ್ಯಾಂಕ್ ಗಳು, ಅಂಚೆ ಇಲಾಖೆ ಮತ್ತು ರಾಜ್ಯ ಮಟ್ಟದ ಬ್ಯಾಂಕರ್ ಗಳ ಸಮಿತಿಗಳ ಬೆಂಬಲದಿಂದ ಇದು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.
ಬ್ಯಾಂಕ್ ಖಾತೆಯನ್ನು ಹೊಂದಿರುವ 18-40 ವರ್ಷ ವಯಸ್ಸಿನ ಯಾವುದೇ ಭಾರತೀಯ ನಾಗರಿಕರು APY ಗೆ ಚಂದಾದಾರರಾಗಬಹುದು. ಮೂರು ವಿಶಿಷ್ಟ ಪ್ರಯೋಜನ ಪಡೆಯಬಹುದು. ಮೊದಲನೆಯದಾಗಿ ಇದು 60 ವರ್ಷಗಳನ್ನು ತಲುಪಿದಾಗ 1000 ರೂ.ರಿಂದ 5000 ರೂ.ರವರೆಗಿನ ಕನಿಷ್ಠ ಖಾತರಿ ಪಿಂಚಣಿಯನ್ನು ಒದಗಿಸುತ್ತದೆ, ಎರಡನೆಯದಾಗಿ ಚಂದಾದಾರರ ಮರಣದ ನಂತರ ಸಂಗಾತಿಗೆ ಪಿಂಚಣಿಯ ಮೊತ್ತವನ್ನು ಜೀವಿತಾವಧಿಯಲ್ಲಿ ಖಾತರಿಪಡಿಸಲಾಗುತ್ತದೆ. ಕೊನೆಯದಾಗಿ ಚಂದಾದಾರರಿಬ್ಬರ ಮರಣದ ಸಂದರ್ಭದಲ್ಲಿ ಮತ್ತು ಸಂಗಾತಿಗೆ, ಸಂಪೂರ್ಣ ಪಿಂಚಣಿ ಹಣವನ್ನು ನಾಮಿನಿಗೆ ಪಾವತಿಸಲಾಗುತ್ತದೆ.