ನವದೆಹಲಿ: ಗಾಂಧಿ ಫೋಟೋ ಬಳಿ ಹಸಿರುಗೆರೆ ಇರುವ 500 ರೂಪಾಯಿ ಮುಖಬೆಲೆಯ ನೋಟುಗಳ ಬಗ್ಗೆ ಅಸಲಿಯತ್ತು ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹರಿದಾಡುತ್ತಿದ್ದು ಈ ಕುರಿತಾಗಿ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ ಸ್ಪಷ್ಟನೆ ನೀಡಿದೆ.
ಚಲಾವಣೆಯಲ್ಲಿರುವ 500 ರೂಪಾಯಿ ಮುಖಬೆಲೆಯ ನೋಟುಗಳಲ್ಲಿ ಹಸಿರು ಪಟ್ಟಿ ಆರ್ಬಿಐ ಗವರ್ನರ್ ಸಹಿ ಬಳಿ ಇಲ್ಲದೆ ಮಹಾತ್ಮಗಾಂಧಿ ಫೋಟೋ ಬಳಿ ಇದ್ದರೆ ಅದು ನಕಲಿ ನೋಟು ಎಂಬ ಸುದ್ದಿ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇಂತಹ ನೋಟುಗಳು ನಕಲಿಯಾಗಿದ್ದು, ಅವುಗಳನ್ನು ಪಡೆದುಕೊಳ್ಳದಂತೆ ಮತ್ತು ತಮ್ಮ ಬಳಿ ಇರುವ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳುವಂತೆ ಸಂದೇಶಗಳು ಹರಿದಾಡುತ್ತಿದ್ದು, ಸತ್ಯಾಸತ್ಯತೆ ಪರಿಶೀಲನೆ ನಡೆಸಿದ ಪಿಐಬಿ ಗೊಂದಲಕ್ಕೆ ತೆರೆ ಎಳೆದಿದೆ.
500 ರೂಪಾಯಿ ನೋಟಿನ ಬಗ್ಗೆ ಗೊಂದಲ ಸೃಷ್ಟಿಸುವ ಮಾಹಿತಿ ಇದಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾಹಿತಿಯ ಪ್ರಕಾರ, ಎರಡು ರೀತಿಯಲ್ಲಿ ಹಸಿರು ಪಟ್ಟಿಯನ್ನು ಹೊಂದಿರುವ 500 ರೂಪಾಯಿ ಮುಖಬೆಲೆಯ ನೋಟುಗಳು ಅಸಲಿಯಾಗಿವೆ ಎಂದು ಹೇಳಲಾಗಿದೆ.