ಇಂದಿಗೆ ಸರಿಯಾಗಿ 25 ವರ್ಷಗಳ ಹಿಂದೆ ಅಂದರೆ ಜುಲೈ 31, 1995 ರಂದು ಭಾರತದಲ್ಲಿ ಮೊದಲ ಮೊಬೈಲ್ ಕರೆ ಮಾಡಲಾಗಿತ್ತು. ಅಂದಿನ ಟೆಲಿಕಾಂ ಸಚಿವ ಸುಖರಾಮ್ ಅಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಜ್ಯೋತಿ ಬಸು ಅವರಿಗೆ ಮೊದಲ ಮೊಬೈಲ್ ಕರೆ ಮಾಡುವ ಮೂಲಕ ಈ ಸೇವೆಗೆ ಚಾಲನೆ ನೀಡಿದ್ದರು.
ಸಚಿವ ಸುಖರಾಮ್ ರಾಷ್ಟ್ರ ರಾಜಧಾನಿ ನವದೆಹಲಿಯ ಸಂಚಾರ ಭವನದಿಂದ ಈ ಕರೆ ಮಾಡಿದ್ದು, ಕೋಲ್ಕತ್ತಾದ ರೈಟರ್ಸ್ ಭವನದಲ್ಲಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಜ್ಯೋತಿಬಸು ಈ ಕರೆಯನ್ನು ಸ್ವೀಕರಿಸಿದ್ದರು. ಅಂದು ಈ ಕರೆ ಮಾಡಲು ಹಾಗೂ ಸ್ವೀಕರಿಸಲು ಇಬ್ಬರೂ ಸಹ ನೋಕಿಯಾ ಮೊಬೈಲ್ ಬಳಸಿದ್ದರು.
ಇಂದು ಟೆಲಿಕಾಂ ಕ್ಷೇತ್ರ ಬಹು ದೊಡ್ಡ ಉದ್ಯಮವಾಗಿ ಬೆಳೆದಿದ್ದು, ಆದರೆ 25 ವರ್ಷಗಳ ಹಿಂದೆ ಮೊಬೈಲ್ ಆರಂಭವಾದಾಗ ಒಳ ಬರುವ ಹಾಗೂ ಹೊರ ಹೋಗುವ ಕರೆಗಳಿಗೆ ಪ್ರತಿ ನಿಮಿಷಕ್ಕೆ 8 ರೂಪಾಯಿ ಶುಲ್ಕ ವಿಧಿಸಲಾಗುತ್ತಿತ್ತು.
ಈಗ ಈ ಕ್ಷೇತ್ರದಲ್ಲಿ ಭಾರೀ ಪೈಪೋಟಿ ಏರ್ಪಟ್ಟಿರುವ ಕಾರಣ ಸಾರ್ವಜನಿಕರಿಗೆ ಅಗ್ಗದ ದರದಲ್ಲಿ ಮೊಬೈಲ್ ಸೇವೆ ಲಭ್ಯವಾಗುತ್ತಿದೆ. ಅಲ್ಲದೇ ಸಾವಿರಾರು ರೂ. ಗಳಿಂದ ಲಕ್ಷಾಂತರ ರೂ. ಮೌಲ್ಯದ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.