ಕೊರೊನಾದಿಂದ ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಕುಸಿದಿದ್ದು, ಇದ್ರ ಮಧ್ಯೆ ವೈಯಕ್ತಿಕ ಸಾಲಗಳ ಬೇಡಿಕೆ ವೇಗವಾಗಿ ಹೆಚ್ಚುತ್ತಿದೆ. ಮುಂಬೈನಲ್ಲಿ ಶೇಕಡಾ 25ರಷ್ಟು ಜನರು ಸ್ವಂತ ಉದ್ಯಮವನ್ನು ಪ್ರಾರಂಭಿಸಲು ವೈಯಕ್ತಿಕ ಸಾಲವನ್ನು ತೆಗೆದುಕೊಂಡಿದ್ದಾರೆ.
ಶೇಕಡಾ 17 ರಷ್ಟು ಜನರು ದ್ವಿಚಕ್ರ ವಾಹನ ಮತ್ತು ನಾಲ್ಕು ಚಕ್ರದ ವಾಹನ ಖರೀದಿಗೆ ತೆಗೆದುಕೊಂಡಿದ್ದಾರೆ. ಮನೆಯಿಂದ ಕೆಲಸ ಮಾಡ್ತಿರುವ ಶೇಕಡಾ 15ರಷ್ಟು ಮಂದಿ ಲ್ಯಾಪ್‌ಟಾಪ್, ಟ್ಯಾಬ್ಲೆಟ್‌ಗಳಂತಹ ಎಲೆಕ್ಟ್ರಾನಿಕ್ ಉಪಕರಣಗಳನ್ನು ಖರೀದಿಸಲು ಸಾಲ ಪಡೆದಿದ್ದಾರೆ.
ಇಂಡಿಯಾ ಲ್ಯಾಂಡ್ಸ್ ಈ ವರದಿ ನೀಡಿದೆ. ಆಧುನಿಕ ಡಿಜಿಟಲ್ ಲ್ಯಾಂಡಿಂಗ್ ಪ್ಲಾಟ್‌ಫಾರ್ಮ್ ಆಗಿರುವ ಇಂಡಿಯಾ ಲ್ಯಾಂಡ್ಸ್ ಒಂದು ವರ್ಷದಿಂದ ಸಾಲಗಾರರ ನಡವಳಿಕೆಯನ್ನು ಅಧ್ಯಯನ ಮಾಡುತ್ತಿತ್ತು. ಮಾರ್ಚ್ 25, 2020 ರಿಂದ ಮಾರ್ಚ್ 20, 2021 ರವರೆಗೆ ಅಧ್ಯಯನ ನಡೆಸಲಾಗಿದ್ದು, 21 ರಿಂದ 55 ವರ್ಷದೊಳಗಿನ 1.5 ಮಿಲಿಯನ್ ಸಾಲಗಾರರ ಡೇಟಾವನ್ನು ಆಧರಿಸಿದೆ.
ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಶೇಕಡಾ 31ರಷ್ಟು ಮಂದಿ ವಾಷಿಂಗ್ ಮಶಿನ್ ನಂತಹ ಐಷಾರಾಮಿ ವಸ್ತುಗಳ ಖರೀದಿಗೆ ಸಾಲ ಪಡೆದಿದ್ದಾರೆ. ಶೇಕಡಾ 25ರಷ್ಟು ಮಂದಿ ಚಿಕಿತ್ಸೆಗಾಗಿ ಸಾಲ ಪಡೆದಿದ್ದಾರೆ.
ಬೆಂಗಳೂರಿನಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ಖರೀದಿಸಲು ಶೇಕಡಾ 28 ರಷ್ಟು ಸಾಲದ ಅರ್ಜಿಗಳು ಬಂದಿದ್ದರೆ, ಶೇಕಡಾ 12ರಷ್ಟು ಸಾಲದ ಅರ್ಜಿಗಳು ಕೋರ್ಸ್‌ಗಳಿಗಾಗಿ ಬಂದಿವೆ. ಬೆಂಗಳೂರಿನಲ್ಲಿ ಅನೇಕರು ದಕ್ಷತೆ ಹೆಚ್ಚಿಸಿಕೊಳ್ಳುವ ಕೋರ್ಸ್ ಮಾಡ್ತಿದ್ದು, ಖಾಲಿ ಸಮಯವನ್ನು ಸದುಪಯೋಗಪಡಿಸಿಕೊಂಡಿದ್ದಾರೆ.
ಹೈದರಾಬಾದ್‌ನಲ್ಲಿ ಶೇಕಡಾ 20 ರಷ್ಟು ಜನರು ವೈದ್ಯಕೀಯ ವೆಚ್ಚವನ್ನು ಪೂರೈಸಲು ಸಾಲವನ್ನು ಕೇಳಿದರೆ, ಶೇಕಡಾ 15ರಷ್ಟು ಜನರು ದಕ್ಷತೆಯನ್ನು ಹೆಚ್ಚಿಸುವ ಕೋರ್ಸ್ ಗೆ ಸಾಲ ಪಡೆದಿದ್ದಾರೆ.