2020ರಲ್ಲಿ ಕೊರೊನಾ ಮಹಾಮಾರಿ ಬಹಳವಾಗಿಯೇ ಕಾಡಿದರೂ ಸಹ ಡಿಜಿಟಲ್ ಕ್ಷೇತ್ರ ಭಾರೀ ಮುನ್ನಡೆ ಸಾಧಿಸಿತ್ತು. ಈ ಸಂದರ್ಭದಲ್ಲಿ ಆನ್ ಲೈನ್ ಬಳಕೆ ಹೆಚ್ಚಿದ್ದಲ್ಲದೆ, ಹೆಚ್ಚಿನ ಕಂಪನಿಗಳು ವರ್ಕ್ ಫ್ರಂ ಹೋಂ ಸೌಲಭ್ಯ ನೀಡಿದ್ದವು. ಅಲ್ಲದೆ, ವಿಡಿಯೋ ಕಾಲ್ ಸೇರಿದಂತೆ ಇನ್ನಿತರ ಸೌಲಭ್ಯಗಳೂ ಹೆಚ್ಚು ಬಳಕೆಯಾಗತೊಡಗಿದವು. ಈಗ ಹೊಸ ವರ್ಷ 2021ರ ಹಿಂದಿನ ದಿನ ಅಂದರೆ 2020 ಡಿಸೆಂಬರ್ 31ರಿಂದ 2021 ಜನವರಿ 1ರೊಳಗೆ ವಾಟ್ಸಾಪ್ ವಾಯ್ಸ್ ಹಾಗೂ ವಿಡಿಯೋ ಕಾಲ್ ದಾಖಲೆ ಬರೆದಿದೆ.
ಅಂದಹಾಗೆ ಈ ಸಮಯದಲ್ಲಿ ಜಗತ್ತಿನಾದ್ಯಂತ ವಾಟ್ಸಾಪ್ ವಿಡಿಯೋ ಹಾಗೂ ಆಡಿಯೋ ಕಾಲ್ ಬಳಸಿದ ಸಂಖ್ಯೆ ಎಷ್ಟು ಗೊತ್ತೇ..? ಬರೋಬ್ಬರಿ 140 ಕೋಟಿ ಮಂದಿ. ಅಂದರೆ, 2019-2020ರ ಹೊಸ ವರ್ಷದ ಅವಧಿಗೆ ಹೋಲಿಸಿದರೆ ಶೇಕಡಾ 50 ರಷ್ಟು ಕರೆ ಮಾಡುವವರ ಸಂಖ್ಯೆಯಲ್ಲಿ ಹೆಚ್ಚಳಗೊಂಡಿದೆ.
ಇನ್ನು ವಾಟ್ಸಾಪ್ ನ ಸಹೋದರ ಸಂಸ್ಥೆಯಾದ ಫೇಸ್ಬುಕ್ ನಲ್ಲಿಯೂ ಸಹ ದಾಖಲೆಯ ಬಳಕೆಯಾಗಿದೆ. ಇದೇ ದಿನ ಇದರ ಫೇಸ್ಬುಕ್ ನಲ್ಲಿ ಸಹ ಜಗತ್ತಿನಲ್ಲಿ 55 ಮಿಲಿಯನ್ ಮಂದಿ ಲೈವ್ ಬ್ರಾಡ್ ಕಾಸ್ಟ್ ನಲ್ಲಿ ಪಾಲ್ಗೊಂಡಿದ್ದರು. ಈ ಮೂಲಕ ಇದರ ಮಾಲೀಕರಾಗಿರುವ ಮಾರ್ಕ್ ಝುಗರ್ ಬರ್ಗ್ ಹೊಸ ಮೈಲುಗಲ್ಲನ್ನೇ ಸಾಧಿಸಿದ್ದಾರೆ. ಮತ್ತವರ ತಂಡ ಸಹ ಎಲ್ಲ ಸಮಸ್ಯೆಗಳನ್ನು ಮೆಟ್ಟಿನಿಂತು ಬಳಕೆದಾರರಿಗೆ ನಿರಾಂತಕ ಸೇವೆ ನೀಡುವ ಪಣವನ್ನೂ ತೊಟ್ಟಿದೆ.