ಕೇಂದ್ರ ಸರ್ಕಾರ 1000 ಹಾಗೂ 500 ಮುಖಬೆಲೆಯ ನೋಟುಗಳನ್ನು ನಿಷೇಧಿಸಿ 2000 ಮುಖಬೆಲೆಯ ನೋಟನ್ನು ಮುದ್ರಿಸಿದ ಬಳಿಕ ಈ ನೋಟಿನ ಕುರಿತು ಚರ್ಚೆಗಳು ನಡೆದುಕೊಂಡು ಬಂದಿವೆ.
ಕೇಂದ್ರ ಸರ್ಕಾರ 2000 ಮುಖಬೆಲೆಯ ನೋಟನ್ನು ನಿಷೇಧಿಸುತ್ತದೆ ಎಂಬ ವದಂತಿಗಳು ಆಗಾಗ ಹರಿದಾಡುತ್ತಲೇ ಇತ್ತು. ಇದೀಗ ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ಈ ಕುರಿತು ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡುವ ಮೂಲಕ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
2000 ಮುಖಬೆಲೆಯ ನೋಟುಗಳನ್ನು ನಿಷೇಧಿಸುವ ಅಥವಾ ಈ ನೋಟುಗಳ ಮುದ್ರಣವನ್ನು ಸ್ಥಗಿತಗೊಳಿಸುವ ಯಾವುದೇ ನಿರ್ಧಾರ ಸರ್ಕಾರದ ಮುಂದಿಲ್ಲ ಎಂದು ಅನುರಾಗ್ ಠಾಕೂರ್ ಸ್ಪಷ್ಟವಾಗಿ ಹೇಳಿದ್ದಾರೆ. ಲಾಕ್ಡೌನ್ ಕಾರಣಕ್ಕೆ ನೋಟುಗಳ ಮುದ್ರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಸೂಚನೆ ನೀಡಲಾಗಿತ್ತು ಎಂದು ಅವರು ಹೇಳಿದ್ದಾರೆ.