ಮಹಾಮಾರಿ ಕೊರೊನಾ ಇಡೀ ವಿಶ್ವದ ಆರ್ಥಿಕ ಪರಿಸ್ಥಿತಿಯನ್ನೇ ಬುಡಮೇಲು ಮಾಡಿದೆ. ಈ ಮಾರಣಾಂತಿಕ ರೋಗಕ್ಕೆ ಇನ್ನೂ ಲಸಿಕೆ ಸಿದ್ದವಾಗಿಲ್ಲವಾದ ಕಾರಣ ಲಾಕ್ ಡೌನ್ ನಂತಹ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ. ಇದು ಮತ್ತೊಂದು ರೀತಿಯಲ್ಲಿ ಪರಿಣಾಮ ಬೀರುತ್ತಿದ್ದು, ಆರ್ಥಿಕ ಹೊಡೆತದಿಂದಾಗಿ ಆನೇಕ ಉದ್ಯಮಗಳು ಮುಚ್ಚಲ್ಪಡುತ್ತಿವೆ. ಹೀಗಾಗಿ ಅಲ್ಲಿನ ಉದ್ಯೋಗಿಗಳು ಉದ್ಯೋಗ ಕಳೆದುಕೊಳ್ಳುವಂತಾಗಿದೆ.
Coursera ಎಂಬ ಆನ್ ಲೈನ್ ತರಬೇತಿ ಸಂಸ್ಥೆ, ಕೊರೊನಾ ಸಂದರ್ಭದಲ್ಲಿ ಭಾರತದಲ್ಲಿ ಕೆಲಸ ಕಳೆದುಕೊಂಡಿರುವವರ ಮಾಹಿತಿಯನ್ನು ಕಲೆ ಹಾಕಿದ್ದು, ಇದು ಬೆಚ್ಚಿ ಬೀಳಿಸುವಂತಿದೆ. ಮಾರ್ಚ್ – ಏಪ್ರಿಲ್ ತಿಂಗಳ ಅವಧಿಯಲ್ಲಿ ಬರೋಬ್ಬರಿ 122 ಮಿಲಿಯನ್ ಭಾರತೀಯರು ಉದ್ಯೋಗ ಕಳೆದುಕೊಂಡಿದ್ದಾರೆನ್ನಲಾಗಿದ್ದು, ಅಲ್ಲದೆ ಉದ್ಯೋಗ ಸೃಷ್ಟಿಗೂ ಕೊರೊನಾ ಪರಿಣಾಮ ಬೀರಿದೆ. ಒಟ್ಟಾರೆ ವಿಶ್ವದಲ್ಲಿ 555 ಮಿಲಿಯನ್ ನೌಕರರು ಹಾಗೂ 200 ಮಿಲಿಯನ್ ಉನ್ನತ ಶಿಕ್ಷಣ ವಿದ್ಯಾರ್ಥಿಗಳು ಸಂಕಷ್ಟಕ್ಕೊಳಗಾಗಿದ್ದಾರೆ.
ವ್ಯಾಪಾರ-ವಹಿವಾಟು, ಕೈಗಾರಿಕೆ, ತಂತ್ರಜ್ಞಾನ ಕ್ಷೇತ್ರಗಳ ಮೇಲೆ ಕೊರೊನಾ ಲಾಕ್ ಡೌನ್ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಿದ್ದು, ಕೌಶಲ್ಯಾಧರಿತ ಸಂಸ್ಥೆಗಳು ಸಹ ಸಂಕಷ್ಟಕ್ಕೆ ಒಳಗಾಗಿವೆ. ಭಾರತದಲ್ಲಿ ಕೌಶಲ್ಯ ಹೊಂದಿರುವ ಉದ್ಯೋಗಿಗಳ ಕೊರತೆ ಇದ್ದು, ಇದರಿಂದಾಗಿಯೇ ವಾರ್ಷಿಕ 332 ಬಿಲಿಯನ್ ರೂಪಾಯಿ ನಂಷ್ಟವುಂಟಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕೌಶಲ್ಯಾಧರಿತ ಉದ್ಯೋಗಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗಲಿದ್ದು, ಇದರಲ್ಲಿ ಪರಿಣಿತರಾದವರಿಗೆ ಸೂಕ್ತ ಅವಕಾಶ ಲಭ್ಯವಾಗಲಿದೆ. ಒಟ್ಟಿನಲ್ಲಿ ಚೀನಾದಲ್ಲಿ ಆರಂಭವಾದ ಕೊರೊನಾ ಎಂಬ ಈ ಹೆಮ್ಮಾಗಿ ವಿಶ್ವವನ್ನೇ ಅಲ್ಲೋಲಕಲ್ಲೋಲಗೊಳಿಸಿದ್ದು, ಭಾರತ ಕೂಡಾ ಇದಕ್ಕೆ ಹೊರತಾಗಿಲ್ಲ. ಸೂಕ್ತ ಲಸಿಕೆ ಸಿದ್ದವಾಗುವವರೆಗೂ ಅಥವಾ ಕೊರೊನಾ ನಿಯಂತ್ರಣಕ್ಕೆ ಬರುವವರೆಗೂ ಇದೇ ಪರಿಸ್ಥಿತಿ ಮುಂದುವರೆದರೆ ಅಚ್ಚರಿಯಿಲ್ಲ.