ಹೆಣ್ಣುಮಗು ಹುಟ್ಟಿದೆ ಅಂದರೆ ಅಂದಿನಿಂದಲೇ ಪ್ರತಿಯೊಬ್ಬ ಪೋಷಕರು ತಮ್ಮ ಮಗಳ ಭವಿಷ್ಯಕ್ಕಾಗಿ ಹಣ ಕೂಡಿಡುವ ಪ್ರಕ್ರಿಯೆ ಆರಂಭವಾಗುತ್ತದೆ. ಅವಳ ಮುಂದಿನ ಓದು, ಮದುವೆ, ಜೀವನಕ್ಕಾಗಿ ಅನೇಕ ಮಂದಿ ಪೋಷಕರು ಉಳಿತಾಯ ಮತ್ತು ಹೂಡಿಕೆ ಆಯ್ಕೆ ಮಾಡುವುದು ಸಹಜ. ಇಂತವರಿಗೊಂದು ಸರ್ಕಾರ ಉತ್ತಮ ಭವಿಷ್ಯದ ಯೋಜನೆಯನ್ನು ಮಾಡಿದೆ.
ಅದೇ ಸುಕನ್ಯಾ ಸಮೃದ್ಧಿ ಯೋಜನೆ. ಈ ಯೋಜನೆಯಡಿಯಲ್ಲಿ ಹಣ ಇಟ್ಟರೆ ಉತ್ತಮ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ 1.5 ಲಕ್ಷ ರೂ.ವರೆಗಿನ ಹೂಡಿಕೆಯ ಮೇಲಿನ ತೆರಿಗೆ ಕಡಿತದ ಲಾಭವನ್ನೂ ನೀಡುತ್ತದೆ. ಇದರ ಬಡ್ಡಿದರಗಳನ್ನು ಪ್ರತಿ ತ್ರೈಮಾಸಿಕಕ್ಕೂ ನಿಗದಿಪಡಿಸಲಾಗಿದೆ. ಪ್ರಸ್ತುತ ಬಡ್ಡಿದರ 2020 ರ ಏಪ್ರಿಲ್ 1 ರಿಂದ 2020 ರ ಜೂನ್ 30 ರವರೆಗೆ ಜಾರಿಯಾಗಿದೆ.
ಇನ್ನು ನಿಮ್ಮ ಮಗಳು 18 ವರ್ಷ ತುಂಬುವ ಮೊದಲು ನೀವು ಇಟ್ಟ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ. 18 ವರ್ಷ ಪೂರೈಸಿದ ನಂತರವಷ್ಟೇ ನೀವು ಭಾಗಶಃ ಹಿಂತೆಗೆದುಕೊಳ್ಳಬಹುದಾಗಿದೆ. ಅದರಲ್ಲೂ ಮೊತ್ತದ 50% ವರೆಗೆ ಹಣವನ್ನು ಹಿಂಪಡೆಯಬಹುದು. ಅಷ್ಟರೊಳಗೆ ಮಗು ಮೃತಪಟ್ಟರೆ ಖಾತೆಯಲ್ಲಿರುವ ಮೊತ್ತವನ್ನು ಪಾಲಕರಿಗೆ ನೀಡಲಾಗುತ್ತದೆ. ಈ ಯೋಜನೆಯಿಂದ ಅತ್ಯುತ್ತಮ ಆದಾಯದ ಜೊತೆಗೆ ಆದಾಯ ತೆರಿಗೆಯನ್ನು ಉಳಿಸಬಹುದು.