ಕೊರೊನಾ ವೈರಸ್ ನಿಂದಾಗಿ ಅನೇಕ ಕಂಪನಿಗಳ ಬಾಗಿಲು ಮುಚ್ಚಿದೆ. ಕೆಲ ಕಂಪನಿಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಇದನ್ನು ಗಮನಿಸಿರುವ ಕೇಂದ್ರ ಸರ್ಕಾರ ಶೀಘ್ರವೇ ಸ್ಟಾರ್ಟ್ ಅಪ್ ಕಂಪನಿಗಳಿಗೆ ಖುಷಿ ಸುದ್ದಿ ನೀಡುವ ಸಾಧ್ಯತೆಯಿದೆ.
ಚೀನಾದಿಂದ ಬರುವ ಹೂಡಿಕೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಇದ್ರಿಂದಾಗಿ ಸ್ಟಾರ್ಟ್ ಅಪ್ ಕಂಪನಿಗಳಿಗೆ ಕಷ್ಟವಾಗಿದೆ. ಸ್ಟಾರ್ಟ್ ಅಪ್ ಕಂಪನಿಗಳಿಗೆ ನೆರವಾಗಲು ಸರ್ಕಾರ ಮಹತ್ವದ ಹೆಜ್ಜೆಯಿಡುವ ಬಗ್ಗೆ ಆಲೋಚನೆ ಮಾಡ್ತಿದೆ. ಅನ್ ಲಿಸ್ಟೆಡ್ ಸ್ಟಾರ್ಟ್ ಅಪ್ ಕಂಪನಿಗಳಲ್ಲಿ ಹೂಡಿಕೆ ಮಾಡುವವರಿಗೆ ಎರಡು ವರ್ಷಗಳವರೆಗೆ ತೆರಿಗೆ ವಿನಾಯಿತಿ ನೀಡಲು ಸರ್ಕಾರ ಮುಂದಾಗಿದೆ.
ಸ್ಟಾರ್ಟ್ ಅಪ್ ಕಂಪನಿಯಲ್ಲಿ ಹೂಡಿಕೆ ಮಾಡುವ ದೇಶಿಯ ಹೂಡಿಕೆದಾರರು ಎರಡು ವರ್ಷಗಳವರೆಗೆ ಎಲ್‌ಟಿಸಿಜಿ ತೆರಿಗೆ ವಿನಾಯಿತಿ ಪಡೆಯಬಹುದು ಎಂದು ಮೂಲಗಳು ಹೇಳಿವೆ. ಲಿಸ್ಟೆಡ್ ಸ್ಟಾರ್ಟ್ ಅಪ್ ಕಂಪನಿಗಳಲಿ ಹೂಡಿಕೆ ಮಾಡಿದ್ರೆ ತೆರಿಗೆ ವಿನಾಯಿತಿ ಮೊದಲಿನಿಂದಲೂ ಸಿಗುತ್ತಿದೆ. ಅನ್ ಲಿಸ್ಟೆಡ್ ಸ್ಟಾರ್ಟ್ ಅಪ್ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ರೆ ತೆರಿಗೆ ರಿಯಾಯಿತಿ ಸಿಗ್ತಿರಲಿಲ್ಲ. ಸಂಸತ್ತಿನ ಸ್ಥಾಯಿ ಸಮಿತಿ ಎಲ್‌ಟಿಸಿಜಿ ತೆರಿಗೆ ವಿನಾಯಿತಿ ನೀಡುವಂತೆ ಶಿಫಾರಸ್ಸು ಮಾಡಿತ್ತು. ಯುವ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುವುದು ಹಾಗೂ ಹೂಡಿಕೆದಾರರನ್ನು ಸೆಳೆಯುವುದು ಇದ್ರ ಉದ್ದೇಶವಾಗಿದೆ.
ಕಳೆದ 5 ವರ್ಷದ ಅವಧಿಯಲ್ಲಿ ಭಾರತದಲ್ಲಿ ನೋಂದಾಯಿಸಿಕೊಂಡ ಕಂಪನಿಯನ್ನು ಸ್ಟಾರ್ಟ್ ಅಪ್ ಕಂಪನಿ ಎನ್ನಲಾಗುತ್ತದೆ. ಅದರ ವಹಿವಾಟು ಹಣಕಾಸು ವರ್ಷದಲ್ಲಿ 25 ಕೋಟಿ ಮೀರಿರಬಾರದು.