ದೇಶಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ, ಜನರ ಜೀವನವನ್ನು ಕಂಗೆಡಿಸಿದೆ. ತಮ್ಮನ್ನು ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಜರ್ಜರಿತರನ್ನಾಗಿ ಮಾಡಿರುವ ಈ ಮಹಾಮಾರಿ ಯಾವಾಗ ಅಂತ್ಯಗೊಳ್ಳುವುದೋ ಎಂಬ ನಿರೀಕ್ಷೆಯಲ್ಲಿ ಸಾರ್ವಜನಿಕರಿದ್ದಾರೆ.
ಕೊರೊನಾ ಲಾಕ್ ಡೌನ್ ಕಾರಣಕ್ಕೆ ಜನ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವುದನ್ನು ಮನಗಂಡಿದ್ದ ಕೇಂದ್ರ ಸರ್ಕಾರ, ಸಾಲಗಳ ಮೇಲಿನ ಇಎಂಐ ಪಾವತಿಯನ್ನು ಮುಂದೂಡಿಕೆ ಮಾಡಿತ್ತು. ಆದರೆ ಇದು ಆಗಸ್ಟ್ 31 ಕ್ಕೆ ಅಂತ್ಯಗೊಳ್ಳಲಿದೆ.
ಇದೀಗ ಲಾಕ್ ಡೌನ್ ಸಡಿಲಿಕೆ ಮಾಡಿದ್ದು, ವ್ಯಾಪಾರ ವಹಿವಾಟುಗಳಿಗೆ ಅನುವು ಮಾಡಿಕೊಡಲಾಗಿದ್ದರೂ ಪರಿಸ್ಥಿತಿ ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ. ಹೀಗಾಗಿ ಇಎಂಐ ಪಾವತಿಯನ್ನು ಮತ್ತಷ್ಟು ದಿನಗಳಿಗೆ ಮುಂದುವರೆಸಬೇಕಲ್ಲದೇ ಮುಂದೂಡಿಕೆಯಾಗಿರುವ ಸಾಲದ ಮೇಲಿನ ಇಎಂಐಗೆ ಬಡ್ಡಿ ವಿಧಿಸಬಾರದೆಂಬ ಒತ್ತಾಯ ಕೇಳಿ ಬಂದಿತ್ತು.
ಆದರೆ ಇಎಂಐ ಪಾವತಿ ಅವಧಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತೆ ಮುಂದೂಡಿಕೆ ಮಾಡುವ ಸಾಧ್ಯತೆಗಳಿಲ್ಲವೆಂದು ಹೇಳಲಾಗಿದೆ. ಹೀಗಾಗಿ ಸಾಲ ಪಡೆದುಕೊಂಡವರು ಸೆಪ್ಟೆಂಬರ್ ತಿಂಗಳಿನಿಂದ ಇಎಂಐ ಪಾವತಿಸುವುದು ಅನಿವಾರ್ಯವಾಗಲಿದೆ.