ದೇಶದಲ್ಲಿ ಐದನೇ ಹಂತದ ಲಾಕ್ಡೌನ್ ಜಾರಿಯಲ್ಲಿದ್ದರೂ ಸಹ ಸಾರ್ವಜನಿಕ ಸಾರಿಗೆ ಆರಂಭಿಸಲು ಅನುಮತಿ ನೀಡಲಾಗಿದೆ. ಹೀಗಾಗಿ ಸರ್ಕಾರಿ ಸಾರಿಗೆ ಎಂದಿನಂತೆ ಆರಂಭವಾದರೂ ಸಹ ಆಟೋ-ಟ್ಯಾಕ್ಸಿ ಹೊರತುಪಡಿಸಿ ಖಾಸಗಿ ಬಸ್ ವ್ಯವಸ್ಥೆ ಮಾತ್ರ ಬೆರಳೆಣಿಕೆಯಷ್ಟು ಆರಂಭವಾಗಿದೆ.
ಕೊರೊನಾ ಸೋಂಕು ತಗುಲುವ ಭೀತಿಯಿಂದ ಸಾರ್ವಜನಿಕ ಸಾರಿಗೆ ಏರಲು ಜನ ಭಯಪಡುತ್ತಿದ್ದು, ಹೀಗಾಗಿ ಈ ಸೇವೆಗಳು ಆರಂಭವಾಗಿದ್ದರೂ ಸಹ ನಷ್ಟದಲ್ಲಿ ನಡೆಯುವಂತಾಗಿದೆ. ಜನ ಸಾರ್ವಜನಿಕ ಸಾರಿಗೆ ಬದಲು ಸಂಚಾರಕ್ಕೆ ಸ್ವಂತ ವಾಹನಗಳನ್ನು ಬಳಸುತ್ತಿದ್ದಾರೆ ಎಂದು ಹೇಳಲಾಗಿದೆ.
ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ಈ ವಿಷಯವನ್ನು ಖಚಿತಪಡಿಸಿದ್ದು, ಸಾರ್ವಜನಿಕ ಸಾರಿಗೆ ಬಳಕೆ ಶೇಕಡ 90ರಷ್ಟು ಕುಸಿತ ಕಂಡಿದೆ ಎಂದು ತಿಳಿಸಿದೆ. ಜನ ಸ್ವಂತ ವಾಹನಗಳ ಬಳಕೆಯತ್ತ ಚಿತ್ತ ಹರಿಸಿರುವುದರಿಂದ ಮುಂದಿನ ದಿನಗಳಲ್ಲಿ ಸಾರ್ವಜನಿಕ ಸಾರಿಗೆ ವಲಯ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.